

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಹಲವು ಅತ್ಯುತ್ತಮ ಇನ್ನಿಂಗ್ಸ್‌ಗಳಿವೆ. ಪ್ರತಿಯೊಬ್ಬರೂ ಒಂದೊಂದು ಇನ್ನಿಂಗ್ಸ್ ಇಷ್ಟಪಡುತ್ತಾರೆ. ಬ್ಯಾಟರ್ ಆಗಿರಲಿ ಅಥವಾ ಬೌಲರ್ ಆಗಿರಲಿ ಒಬ್ಬೊಬ್ಬರಿಗೂ ಒಂದೊಂದು ಕ್ಷಣ ಸದಾ ನೆನಪಿನಲ್ಲಿ ಉಳಿಯುತ್ತದೆ. ಆ ಕ್ಷಣವನ್ನು ಆಗಾಗ ನೆನೆದು ಪ್ರಶಂಸೆಯ ಸುರಿಮಳೆಗೈಯುತ್ತಾರೆ. ಅದೇ ರೀತಿ ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಶಾ ಆಫ್ರಿದಿಗೆ ಭಾರತದ ರನ್ ಮೆಶಿನ್ ವಿರಾಟ್ ಕೊಹ್ಲಿ ಆಡಿದ ಸೂಪರ್ ಇನ್ನಿಂಗ್ಸ್ ವೃತ್ತಿ ಜೀವನದಲ್ಲೇ ಅದ್ಭುತ ಇನ್ನಿಂಗ್ಸ್ ಎಂದು ಹೊಗಳಿದ್ದಾರೆ.
ದಾಖಲೆಗಳ ಸರದಾರ, ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್‌ನಲ್ಲಿ ದಿಗ್ಗಜ ಆಟಗಾರನಾಗಿ ಮನ್ನಣೆ ಗಳಿಸಿದ್ದಾರೆ. ತನ್ನ ಬ್ಯಾಟ್‌ನಿಂದ ಟನ್‌ಗಟ್ಟಲೆ ರನ್, ದಾಖಲೆಗಳನ್ನು ಸೃಷ್ಟಿಸಿ ವಿಶ್ವ ಕ್ರಿಕೆಟ್‌ನ್ನು ಆಳುತ್ತಿರುವ ರಾಜನಾಗಿದ್ದಾರೆ. ಕೊಹ್ಲಿ ವೃತ್ತಿ ಜೀವನದಲ್ಲಿ ಅನೇಕ ಸ್ಮರಣೀಯ ಇನ್ನಿಂಗ್ಸ್‌ಗಳಿವೆ. ಆದರೆ, ಇವೆಲ್ಲವುಗಳಲ್ಲಿ ವಿಶೇಷವೆಂದರೆ 2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ ಅಜೇಯ 82 ರನ್‌ಗಳ ಇನ್ನಿಂಗ್ಸ್. ಈ ಪಂದ್ಯದಲ್ಲಿ ಪಾಕ್ ಬೌಲರ್ ಶಾಹೀನ್ ಶಾ ಆಫ್ರಿದಿ ಕೂಡ ಇದ್ದರು. ಇದೀಗ ಮತ್ತೊಮ್ಮೆ ತಮ್ಮ ತಂಡದ ವಿರುದ್ಧ ಕೊಹ್ಲಿ ಆಡಿದ ಆ ಅದ್ಭುತ ಇನ್ನಿಂಗ್ಸ್ ನೆನಪಿಸಿಕೊಂಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿರುವ ಶಾಹೀನ್, ನನ್ನ ವೃತ್ತಿಜೀವನದಲ್ಲೇ ವಿರಾಟ್ ಕೊಹ್ಲಿ ಅವರ ಅದ್ಭುತ ಇನ್ನಿಂಗ್ಸ್ (82*) ಅನ್ನು ಮತ್ತೆ ನೋಡಿಲ್ಲ. ಸೋಲುವ ಪಂದ್ಯವನ್ನು ಗೆಲುವಿನ ಕಡೆಗೆ ತಿರುಗಿಸಿದ ರೀತಿ ಅದ್ಭುತವಾಗಿತ್ತು ಎಂದು ಕೊಹ್ಲಿಯ ಬ್ಯಾಟಿಂಗ್ ಅನ್ನು ಶಾಹೀನ್ ಶ್ಲಾಘಿಸಿದರು. ಇದೀಗ ಶಾಹೀನ್ ಅವರ ಈ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ ಪಾಕಿಸ್ತಾನ ನೀಡಿದ್ದ 160 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ 31 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಟೀಮ್ ಇಂಡಿಯಾ ಸೋಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅನಿರೀಕ್ಷಿತ ರೀತಿಯಲ್ಲಿ ಕೊಹ್ಲಿ ಏಕಾಂಗಿಯಾಗಿ ಹೋರಾಡಿ ಪಂದ್ಯವನ್ನು ಗೆಲ್ಲಿಸಿದರು. ಈ ಪಂದ್ಯದಲ್ಲಿ ಕೊಹ್ಲಿ 53 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 82 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊಹ್ಲಿ ವೃತ್ತಿ ಬದುಕಿನಲ್ಲಿ ಇದೊಂದು ವಿಶೇಷ ಇನ್ನಿಂಗ್ಸ್ ಆಗಿ ಉಳಿದಿದೆ. (ಏಜೆನ್ಸೀಸ್)