

ಮೆಹ್ಸಾನಾ: ನಿರ್ಮಾಣ ಸ್ಥಳದಲ್ಲಿ ಗೋಡೆ ಕುಸಿದು 09 ಮಂದಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಗುಜರಾತ್‌ನ (Gujarat) ಮೆಹ್ಸಾನಾ ಜಿಲ್ಲೆಯ ಕಡಿ ತಾಲ್ಲೂಕಿನ ಜಸಾಲ್ಪುರ್ ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾ ಅಭಿವೃದ್ಧಿ ಅಧಿಕಾರಿ (DDO) ಡಾ. ಹಸರತ್ ಜಾಸ್ಮಿನ್, ಕಡಿ ತಾಲ್ಲೂಕಿನ ಜಸಾಲ್ಪುರ್ ಗ್ರಾಮದಲ್ಲಿ ಖಾಸಗಿ ಕಂಪನಿ ಒಂದಕ್ಕೆ ಅಂಡರ್ಗ್ರೌಂಡ್ ಟ್ಯಾಂಕ್ ನಿರ್ಮಾಣ ಮಾಡಲು ಮಣ್ಣು ಅಗೆಯುತ್ತಿರುವಾಗ ಗೋಡೆ ಸಡಿಲಗೊಂಡು ಏಕಾಏಕಿ ಕುಸಿದಿದೆ. ದುರ್ಘಟನೆಯಲ್ಲಿ 09 ಮಂದಿ ಮೃತಪಟ್ಟಿದ್ದು, 06 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ 2-3 ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಘಟನೆ ಕುರಿತಂತೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ನ (Gujarat) ಮೆಹ್ಸಾನಾದಲ್ಲಿ ಗೋಡೆ ಕುಸಿತದಿಂದ ಉಂಟಾದ ಅಪಘಾತ ಅತ್ಯಂತ ದುಃಖಕರವಾಗಿದೆ. ಇದರಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡವರಿಗೆ ನನ್ನ ತೀವ್ರ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ, ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಲ್ಲಿ ತೊಡಗಿದೆ ಎಂದು ಟ್ವೀಟ್ ಮಾಡಿದ್ದಾರೆ.