

ನಂಜನಗೂಡು: ತಾಲೂಕಿನ ಹದಿನಾರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ 9.5 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಹೇಳಿದರು.
ಬುಧವಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಸುಮಾರು 1782 ಸದಸ್ಯ ಬಲ ಹೊಂದಿದೆ. ಇಲ್ಲಿಯವರೆಗೆ ಹೈನುಗಾರಿಕೆ ಹಾಗೂ ಬೆಳೆಸಾಲ ಸೇರಿದಂತೆ ಸುಮಾರು 11.23 ಕೋಟಿ ಸಾಲ ವಿತರಿಸಿದ್ದು, ಅಂದಾಜು 9.5ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.
ರೈತರು ಸಹಕಾರ ಸಂಘದಿಂದ ನೀಡಲಾಗುವ ಸವಲತ್ತುಗಳನ್ನು ಪಡೆದುಕೊಳ್ಳುವ ಜತೆಗೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಸಹಕಾರ ನೀಡಬೇಕು ಎಂದರು.
ಸಿಇಒ ಎಚ್.ಬಿ.ಶಂಕರ್ ಸಂಘದ ಆಯ-ವ್ಯಯದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಜಿ.ಪಂ ಮಾಜಿ ಸದಸ್ಯ ಎಚ್.ಎನ್.ನಂಜಪ್ಪ, ತಾ.ಪಂ ಮಾಜಿ ಸದಸ್ಯ ಶ್ರೀಕಂಠು, ಮಾಜಿ ಅಧ್ಯಕ್ಷ ವಕೀಲ ಶೇಖರ್ ಮಾತನಾಡಿದರು.
ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಉಪಾಧ್ಯಕ್ಷ ಬಿ.ಎಂ.ವೃಷಭೇಂದ್ರ, ಮಾಜಿ ಅಧ್ಯಕ್ಷ ಶಿವಣ್ಣ, ನಿರ್ದೇಶಕ ಪ್ರಸಾದ್, ಎಚ್.ಎಸ್.ಮಹೇಂದ್ರ, ಪ್ರಭುಸ್ವಾಮಿ, ನಂಜುಂಡಯ್ಯ, ರವಿ, ಎಚ್.ಎಸ್.ರಾಜು, ಎಂ.ಮಧು, ಗೌರಮ್ಮ, ಎಲ್.ಸಿದ್ದರಾಜು, ಬ್ಯಾಂಕ್ ಪ್ರತಿನಿಧಿ ಬಿ.ಸಿ.ಶಿವಲಿಂಗೇಗೌಡ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಬಿ.ಶಂಕರ್, ಸಿಬ್ಬಂದಿ ಇದ್ದರು.