

Kannadigas: ಕನ್ನಡ ಚಿತ್ರರಂಗಕ್ಕೆ 91 ವರ್ಷ ಪೂರೈಸಿದ ಹಿನ್ನೆಲೆ ಅಮೆರಿಕದ ಒರ್ಲಾಂಡೋ ಕನ್ನಡ ಸಂಘದವರು 'ತಾರಾಲೋಕ' ಎಂಬ ವಿನೂತನ ಕಾರ್ಯಕ್ರಮವನ್ನು 8ನೇ ನಾವಿಕ ಸಮಾವೇಶದಲ್ಲಿ ಬುಧವಾರ ಪ್ರಸ್ತುತಿ ಪಡಿಸಿದರು.
ಕಾರ್ಯಕ್ರಮದಲ್ಲಿ ಅಮೆರಿಕಾದಲ್ಲಿ ವಾಸಿಸುವ ಡಾಕ್ಟರ್ಸ್, ಇಂಜಿನಿಯರ್, ವ್ಯವಹಾರ-ವ್ಯಾಪಾರ ಮಾಡುವ, ಓದುವ, ಮನೆಗೆಲಸ ಮಾಡಿಕೊಂಡಿರುವ ನಮ್ಮ ಕನ್ನಡಿಗರು ಎಲ್ಲದನ್ನೂ ಮರೆತು ಕುಣಿದು ಕುಪ್ಪಳಿಸಿದರು. ರಂಗದ ಮೇಲೆ ಕನ್ನಡತವನ್ನ ಮೆರೆಯುವುದರ ಜತೆಗೆ ತುಂಬಿದ ಸಭೆಯಲ್ಲಿ ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಸವಿ ನೆನಪುಗಳನ್ನ ಕೆದಕಿ ಕೊಟ್ಟರು.
ಅಲ್ಲದೆ, ಬೆಂಗಳೂರಿನಿಂದ ಬಂದಂತಹ ತಾರಾ ದಂಪತಿ ನಮಿತಾ ರಾವ್ ಮತ್ತ ವಿಕ್ರಂ ಸೂರಿ ಅವರ ನಿರ್ದೇಶನದಲ್ಲಿ ರಂಗಕ್ಕೆ ಬಂದ 60 ಜನ ಅಮೆರಿಕದ ಕನ್ನಡಿಗರು, ಅವರವರಿಗೆ ನೀಡಿದ ಪಾತ್ರಗಳಿಗೆ ಜೀವ ತುಂಬಿದರು.
ಒಟ್ಟು 65 ನಿಮಿಷದೊಳಗೆ ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕ ಸಂಬಂಧ ಕಲ್ಪಿಸುವುದರೊಂದಿಗೆ ನಿರ್ದೇಶಕರಾದ ತಾರಾ ದಂಪತಿ ಯಶ್ವಸಿ ಆಗಿದ್ದಾರೆ. ಹಿರಿಯ ಕಲಾವಿದರಾದ ಡಾ.ರಾಜ್, ವಿಷ್ಣು, ಅಂಬರೀಷ್, ಶಂಕರ್ನಾಗ್, ಅನಂತ್ನಾಗ್, ದ್ವಾರಕೀಶ್ ರವಿಚಂದ್ರನ್ ಸೇರಿದಂತೆ ನಟಿಯರಾದ ಭಾರತಿ, ಜಯಂತಿ, ಮಂಜುಳಾ, ಸೌಂದರ್ಯ ಅವರ ವಿಭಿನ್ನ ಲುಕ್ಗಳನ್ನು ಹುಡುಕಿ, ಅವರಿಗೆ ತಕ್ಕದಾದ ವೇಷಭೂಷಣ ತೊಡಿಸಿ, ತಾಲೀಮ ಮಾಡಿಸಿ, ಯೋಗ್ಯ ರಂಗಪರಿಕಗಳೊಂದಿಗೆ ರಂಗಕ್ಕೆ(ವೇದಿಕೆ) ಕರೆತಂದಿದ್ದರ ಹಿರಿಮೆ ಒರ್ಲಾಂಡೋ ಕನ್ನಡ ಸಂಘದ ಸಕಲರಿಗೂ ಸಲ್ಲುತ್ತದೆ.
ಸಿಕ್ಕಿರುವ ಅವಕಾಶದಲ್ಲಿ ಚಿತ್ರರಂಗದ ಸೂಕ್ಷ್ಮ ಮಾಹಿತಿಯನ್ನ ಮುಂದಿನ ಪೀಳಿಗೆಗೆ ತಲುಪಿಸುವ ಈ ಶ್ರಮ ಶ್ಲಾಘನೀಯ. ವೇದಿಕೆ ಮೇಲೆ ಬಂದು ಅಭಿನಯಿಸಿದ ಶಂಕರನಾಗ, ವಿಷ್ಣುವರ್ಧನ್, ದ್ವಾರಕೀಶ್, ಅಂಬರೀಷ್, ಜಯಂತಿ ಸೇರಿದಂತೆ ಇತರ ಕಲಾವಿದರ ಪಾತ್ರಧರಿಸಿದ ನಮ್ಮ ಕಲಾವಿದರು ಅಭಿನಯ ಬಹಳ ನೆನಪಿಡುವಂತಹ ದಿನವಾಗಿದೆ.
ಇಂದಿನ ಅವಸರದ ಜೀವನಲ್ಲಿ, ಗಡಿಬಿಡಿ, ಕೆಲಸದೊತ್ತಡ, ಫ್ಯಾಮಿಲಿ ಟೆನ್ಷನ್ಗಳ ನಡೆವೆಯೂ ಬಿಡುವು ಮಾಡಿಕೊಂಡು 60 ಕಲಾವಿದರು ಒಂದಾಗಿ ಸಾರ್ಥಕ ರಂಗಪ್ರಯೋಗ ಮಾಡಿದ್ದು ಹೆಮ್ಮೆಯ ವಿಷಯ. ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು..- ಡಾ ಯಶವಂತ ಸರದೇಶಪಾಂಡೆ