

ಬೈಂದೂರು: ಅಪ್ರಾಪ್ತ ವಯಸ್ಕ ಬಾಲಕನನ್ನು ಕೊಲ್ಲೂರಿಗೆ ಕರೆದೊಯ್ದು ವಸತಿಗೃಹದಲ್ಲಿ ತಂಗಿದ್ದ ಕೇರಳದ ವಿವಾಹಿತ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ಚೇರ್ತಲ ನಿವಾಸಿ ಸನೂಷಾ(27) ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.
ಎರಡು ದಿನಗಳ ಹಿಂದೆ ಸನೂಷಾ ಹಾಗೂ 17 ವರ್ಷದ ಬಾಲಕ ನಾಪತ್ತೆಯಾಗಿದ್ದು, ಎರಡೂ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಆಕೆ ಪ್ರಯಾಣದ ನಡುವೆ ಎಲ್ಲೂ ಮೊಬೈಲ್ ಬಳಸಿರದ ಕಾರಣ ಪೊಲೀಸರಿಗೆ ಅವರ ಸುಳಿವು ಸಿಕ್ಕಿರಲಿಲ್ಲ. ಕೊಲ್ಲೂರು ತಲುಪಿದ ಬಳಿಕ ಮಹಿಳೆ ತನ್ನ ಮೊಬೈಲ್‌ನಿಂದ ಗೆಳತಿಗೆ ಸಂದೇಶ ಕಳುಹಿಸಿದ್ದು, ಆ ಸುಳಿವಿನ ಆಧಾರದಲ್ಲಿ ಕೊಲ್ಲೂರು ವಸತಿಗೃಹದಲ್ಲಿರುವುದು ಪತ್ತೆಯಾಗಿತ್ತು. ಕೇರಳ ಪೊಲೀಸರಿಗೆ ಕೊಲ್ಲೂರಿಗೆ ಆಗಮಿಸಿ ಆರೋಪಿ ಮಹಿಳೆಯನ್ನು ಬಂಧಿಸಿ ಕರೆದೊಯ್ದರು. ಆಕೆಯನ್ನು ಕೊಟ್ಟಾರಕ್ಕರ ಜೈಲಿಗೆ ಹಾಗೂ ಬಾಲಕನನ್ನು ಹೆತ್ತವರ ಜತೆಗೆ ಕಳುಹಿಸಲಾಗಿದೆ.