ಇದನ್ನು ಬಿಟ್ರೆ ಬೇರೆ ದಾರಿಯಿಲ್ಲ…ವೃದ್ಧಾಪ್ಯ ಪಿಂಚಣಿಗಾಗಿ 2 KM ತೆವಳಿದ ವೃದ್ಧೆಯ ಮಾತು ಕೇಳಿದ್ರೆ ಕಣ್ತುಂಬಿ ಬರುತ್ತೆ! Pension

Old Woman Pension
Published on

ಭುವನೇಶ್ವರ: ಜನರಲ್ಲಿ ದಿನೇದಿನೆ ಮಾನವೀಯತೆ ಮರೆಯಾಗುತ್ತಿದೆ ಎನ್ನುವುದಕ್ಕೆ ಒಡಿಶಾದಲ್ಲಿ ನಡೆದಿರುವ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಕಿಯೋಂಜಾರ್ ಜಿಲ್ಲೆಯಲ್ಲಿ 80 ವರ್ಷದ ವೃದ್ಧೆಯೊಬ್ಬರು ತಮ್ಮ ವೃದ್ಧಾಪ್ಯ ಪಿಂಚಣಿ ( Pension ) ಪಡೆಯಲು ಸುಮಾರು 2 ಕಿ.ಮೀ ದೂರದಲ್ಲಿರುವ ಪಂಚಾಯತಿ ಕಚೇರಿಗೆ ತೆವಳುಕೊಂಡು ಸಾಗಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ಕಳೆದ ಶನಿವಾರ ನಡೆದಿದ್ದು, ಸರ್ಕಾರಿ ವ್ಯವಸ್ಥೆಯ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ವಿಡಿಯೋದಲ್ಲಿ ಇರುವ ವೃದ್ಧೆಯನ್ನು ಪಥೂರಿ ದೆಹುರಿ ಎಂದು ಗುರುತಿಸಲಾಗಿದೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ದೆಹುರಿಗೆ ನಡೆದಾಡಲು ಸಹ ಸಾಧ್ಯವಾಗುತ್ತಿಲ್ಲ. ವಯಸ್ಸಾದವರಿಗೆ ಮನೆ ಬಾಗಿಲಿಗಿ ಪಿಂಚಣಿ ತಲುಪಿಸಬೇಕು ಎಂಬ ಸರ್ಕಾರದ ನಿಯಮ ಇದ್ದರೂ ಅದನ್ನು ಧಿಕ್ಕರಿಸಿ, ಪಿಂಚಣಿ ಪಡೆಯಲು ಕಚೇರಿಗೆ ಬರಬೇಕು ಎಂದು ಪಂಚಾಯತಿ ಅಧಿಕಾರಿ (ಪಿಇಒ) ಒತ್ತಾಯಿಸಿದರು ಎಂದು ವೃದ್ಧೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದಿನನಿತ್ಯದ ಖರ್ಚಿಗೆ ನಾನು ಪಿಂಚಣಿಯನ್ನೇ ನೆಚ್ಚಿಕೊಂಡಿದ್ದೇನೆ. ಆದರೆ, ಅದನ್ನು ತಲುಪಿಸಲು ನನ್ನ ಮನೆಗೆ ಯಾರೂ ಬರಲಿಲ್ಲ. ಪಂಚಾಯಿತಿ ಕಚೇರಿಗೆ ತೆವಳುವುದನ್ನು ಬಿಟ್ಟರೆ ನನಗೆ ಬೇರೆ ದಾರಿಯೇ ಇರಲಿಲ್ಲ ಎಂದು ದೆಹುರಿ ಕಷ್ಟದ ಹಾಗೂ ನೋವಿನ ಪ್ರಯಾಣವನ್ನು ಮೆಲುಕು ಹಾಕಿದರು. 2 ಕಿಮೀ ದೂರ, ಸುಡುವ ಶಾಖ ಮತ್ತು ಒರಟು ದಾರಿ.... ಇಷ್ಟೆಲ್ಲ ಸಮಸ್ಯೆಗಳ ನಡುವೆ ಭರವಸೆಯಂತೆ ಸರ್ಕಾರಿ ಸೇವೆಗಳನ್ನು ತಲುಪಿಸದಿದ್ದಾಗ ಇಂತಹ ದುರ್ಬಲ ವ್ಯಕ್ತಿಗಳು ಎದುರಿಸುವ ತೀವ್ರ ಸವಾಲುಗಳನ್ನು ಈ ಒಂದು ಘಟನೆ ಎತ್ತಿ ತೋರಿಸುತ್ತದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಯಸ್ಸಾದ ನಾಗರಿಕರ ಯೋಗಕ್ಷೇಮದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಅಧಿಕಾರಿಗಳ ವಿರುದ್ಧ ನೆಟ್ಟಿಗರು ಕಿಡಿಕಾಡಿದ್ದಾರೆ. ಸಾರ್ವಜನಿಕರ ಟೀಕೆ ವ್ಯಕ್ತವಾಗುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ಏನು ನಡೆದಿದೆಯೋ ಅದರ ಬಗ್ಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ ಎಂದು ರೈಸುವಾನ್‌ ಗ್ರಾಮದ ಮುಖ್ಯಸ್ಥ ಬಗುನ್ ಚಾಂಪಿಯಾ ಹೇಳಿದರು. ಅಲ್ಲದೆ, ಮುಂದಿನ ತಿಂಗಳಿನಿಂದ ದೆಹುರಿ ಅವರ ಪಿಂಚಣಿ ಮತ್ತು ಪಡಿತರವನ್ನು ಅವರ ಮನೆಗೆ ನೇರವಾಗಿ ತಲುಪಿಸುವಂತೆ ನಾವು ಪಿಇಒ ಮತ್ತು ಪೂರೈಕೆ ಸಹಾಯಕರಿಗೆ ಸೂಚಿಸಿದ್ದೇವೆ ಎಂದರು.

ಅದೇ ರೀತಿ ಟೆಲ್ಕೊಯ್‌ನ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ (ಬಿಡಿಒ) ಗೀತಾ ಮುರ್ಮು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪ್ರಯಾಣ ಮಾಡಲು ಸಾಧ್ಯವಾಗದ ಫಲಾನುಭವಿಗಳು ತಮ್ಮ ಭತ್ಯೆಗಳನ್ನು ಮನೆಯಲ್ಲಿಯೇ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಪಿಇಒಗಳಿಗೆ ನಿರ್ದೇಶನ ನೀಡಿದ್ದೇವೆ. ಈ ಘಟನೆ ಎಂದಿಗೂ ಸಂಭವಿಸಬಾರದು ಎಂದರು.

ವಯೋವೃದ್ಧರು ಮತ್ತು ಅಂಗವಿಕಲ ನಾಗರಿಕರ ಮನೆಗಳಿಗೆ ಪಿಂಚಣಿ ಮತ್ತು ಇತರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ತಲುಪಿಸಬೇಕೆಂಬ ನಿಯಮವನ್ನು ಭಾರತ ಸರ್ಕಾರ ಮಾಡಿದೆ. ಆದರೆ, ಈ ಪ್ರಕರಣ ಇದಕ್ಕೆ ವಿರುದ್ಧವಾಗಿದೆ. ಸರ್ಕಾರಿ ನಿಯಮದ ಹೊರತಾಗಿಯೂ, ಅದರ ಅನುಷ್ಠಾನದಲ್ಲಿ ಲೋಪಗಳು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ. ಪಥೂರಿ ದೆಹುರಿಯಂತಹ ಪ್ರಕರಣಗಳು ಸರ್ಕಾರದ ಯೋಜನೆಗಳ ಸರಿಯಾದ ಮೇಲ್ವಿಚಾರಣೆ ಮತ್ತು ಜಾರಿ ಕೊರತೆಯಿರುವ ದೊಡ್ಡ ವ್ಯವಸ್ಥಿತ ಸಮಸ್ಯೆಯನ್ನು ಪ್ರತಿಬಿಂಬಿಸುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net