

ಧಾರವಾಡ: ಮುಂಗಾರು ಮಳೆಯ ಆರ್ಭಟಕ್ಕೆ ಸಿಕ್ಕ 8 ವರ್ಷದ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ.
ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ತಂದೆ ಜತೆಗೆ ಹೊಲಕ್ಕೆ ಹೋಗಿದ್ದ ಬಾಲಕಿ ಶ್ರೀದೇವಿ ನಿಂಗಪ್ಪ ಗಾಣಿಗೇರ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.
ಶ್ರೀದೇವಿ ನಿಂಗಪ್ಪ ಗಾಣಿಗೇರ ಗುರುವಾರ ತಂದೆಯೊಂದಿಗೆ ಹೊಲಕ್ಕೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದಳು. ಈ ವೇಳೆ ಅವಘಡ ಸಂಭವಿಸಿದ್ದು, ಬಾಲಕಿ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ.
ಸ್ಥಳಕ್ಕೆ ಕಲಘಟಗಿ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ತಗ್ಗುಪ್ರದೇಶದ ಮನೆಗಳಿಗೂ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.