

ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ, ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ರಕ್ಷಿತ್ ಶೆಟ್ಟಿಯವರ '777 ಚಾರ್ಲಿ' ಚಿತ್ರದ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್ನಲ್ಲಿ ರಿಲೀಸ್ ಆಗಿರುವ ಈ 'ಟಾರ್ಚರ್ ಸಾಂಗ್' ಎಂಬ ಹೆಸರಿನ ಹಾಡು ಐದು ಭಾಷೆಗಳಲ್ಲಿ ಮೂಡಿಬಂದಿದೆ.
ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸಾಗಿರುವ 'ಟಾರ್ಚರ್ ಸಾಂಗ್'ನ ಕನ್ನಡ ಆವೃತ್ತಿಯನ್ನು ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ಗೀತೆಗೆ ನಾಗಾರ್ಜುನ ಶರ್ಮ ಸಾಹಿತ್ಯ ಒದಗಿಸಿದ್ದರೆ, ನೊಬಿನ್ ಪೌಲ್ ಸಂಗೀತ ನೀಡಿದ್ದಾರೆ. ಹಿಂದಿ ಆವೃತ್ತಿಗೆ ಶೈನಿ ದಾಸ್ ಸಾಹಿತ್ಯ ಬರೆದಿದ್ದರೆ, ಸ್ವರೂಪ್ ಖಾನ್ ಹಾಡಿದ್ದಾರೆ. ಚಿತ್ರದ ವಿವಿಧ ಭಾಷಾ ಆವೃತ್ತಿಗಳ ವಿವರಗಳನ್ನು ಹೊಂದಿದ ಲಿಂಕ್ಅನ್ನು ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಪ್ಯಾನ್ ಇಂಡಿಯ ಚಿತ್ರವಾಗಿರುವ 777 ಚಾರ್ಲಿ ಚಿತ್ರವನ್ನು ಬರುವ ಡಿಸೆಂಬರ್ 31 ಕ್ಕೆ ಜಾಗತಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್ ಬಿ.ಶೆಟ್ಟಿ, ಡ್ಯಾನಿಶ್ ಸೇತ್ ಮತ್ತು ಬಾಬಿ ಸಿಂಹ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರವನ್ನು ಕಿರಣ್ರಾಜ್ ಕೆ. ನಿರ್ದೇಶಿಸಿದ್ದಾರೆ. ನಾಯಿಯೊಂದರ ಸುತ್ತ ಹೆಣೆದಿರುವ ಈ ಚಿತ್ರವನ್ನು ಜಿ.ಎಸ್.ಗುಪ್ತ ಮತ್ತು ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿದ್ದಾರೆ.