ಸಿಲಿಂಡರ್​ ಸ್ಫೋಟ: ಅಡುಗೆ ಮಾಡ್ತಿದ್ದ ಅಜ್ಜಿಯ ಪ್ರಾಣ ಉಳಿದದ್ದೇ ರೋಚಕ!

fire
Published on

ಚಾಮರಾಜನಗರ: ಅಜ್ಜಿ-ಮೊಮ್ಮಗಳು ವಾಸಿಸುತ್ತಿದ್ದ ಮನೆಯೊಂದರಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲೇ ಗ್ಯಾಸ್​ ಸಿಲಿಂಡರ್​ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಸಿಲಿಂಡರ್​ ಸ್ಫೋಟಗೊಂಡು ಬೆಂಕಿಯಲ್ಲಿ ಮನೆಯು ಧಗದಗನೇ ಉರಿದರೂ, ಮೊಮ್ಮಗಳ ಸಮಯಪ್ರಜ್ಞೆಯಿಂದಾಗಿ ಪ್ರಾಣಹಾನಿ ತಪ್ಪಿದೆ.

ಬುಧವಾರ ರಾತ್ರಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದ ನಿವಾಸಿ ಲಕ್ಷ್ಮಮ್ಮ(75) ಎಂಬುವರು ಅಡುಗೆ ಮಾಡುತ್ತಿದ್ದ ವೇಳೆ, ಎಲ್​ಪಿಜಿ​ ಸಿಲಿಂಡರ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸಮಯಪ್ರಜ್ಞೆ ತೋರಿದ ಮೊಮ್ಮಗಳು ಮೇಘನಾ, ಅಜ್ಜಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾಳೆ. ಅಜ್ಜಿ, ಮೊಮ್ಮಗಳು ಹೊರಬರುತ್ತಿದ್ದಂತೆಯೇ ಸಿಲಿಂಡರ್ ಸ್ಪೋಟಗೊಂಡಿದೆ. ಮನೆ ಹೊತ್ತಿ ಉರಿದಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬೇಗೂರು ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net