

ಬೆಂಗಳೂರು: ರಾಜ್ಯದಲ್ಲಿರುವ ಖಾಸಗಿ ವಲಯಗಳಲ್ಲಿ ಶೇ.75 ಉದ್ಯೋಗಗಳನ್ನು ಕನ್ನಡಿಗರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಔದ್ಯೋಗಿಕ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಖಾಸಗಿ, ಸರ್ಕಾರಿ ಮತ್ತು ಅರೆ ಸರ್ಕಾರಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಇದರ ಜತೆಗೆ ಔದ್ಯೋಗಿಕ ನೀತಿಯ ಪರಿಣಾಮಕಾರಿ ಅನುಷ್ಠಾನಗೊಳಿಸಲಾಗುವುದೆಂದರು.
ಕೌಶಲ್ಯ, ಅರೆ ಕೌಶಲ್ಯ ವಲಯದಲ್ಲಿ ಶೇ. 75 ಉದ್ಯೋಗಗಳನ್ನು ಕನ್ನಡಿಗರಿಗೆ ದೊರಕಿಸಲು ಸರ್ಕಾರ ಆದ್ಯತೆ ನೀಡಲಿದೆ. ಕನ್ನಡದ ಪರಿಣಾಮಕಾರಿ ಬಳಕೆಗೆ ಈಗಾಗಲೇ ಹೊರಡಿಸಿರುವ ಆದೇಶಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದರು. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಚಾಲನೆ ನೀಡಿದ್ದ ರಾಜ್ಯದ 180 ಸರ್ಕಾರಿ ಐಟಿಐಗಳ ಉನ್ನತೀಕರಣದ ಕಾರ್ಯ ಇದೇ ತಿಂಗಳು ಪೂರ್ಣಗೊಂಡು ವಿದ್ಯಾರ್ಥಿಗಳಿಗೆ ಮುಕ್ತವಾಗಲಿದೆ. ಪ್ರಾಥಮಿಕ ಮಟ್ಟದಿಂದ ಉನ್ನತ ಶಿಕ್ಷಣದವರೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿ ಜಾಗತಿಕ ಮಟ್ಟದಲ್ಲಿ ಪೈಪೋಟಿಗೆ ಸಿದ್ಧರಾಗುವಂತೆ ತಯಾರು ಮಾಡಲಾಗುವುದು. ನೂತನ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ಮಾತೃಭಾಷೆಯಲ್ಲೇ ಉನ್ನತ ಹಾಗೂ ತಾಂತ್ರಿಕ ಶಿಕ್ಷಣವನ್ನು ಪಡೆಯಲು ನಮ್ಮ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದರು.
ಕನ್ನಡದಲ್ಲಿ ನಮೋ ಶುಭಾಶಯ
ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕ ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ಕರ್ನಾಟಕ ಅತ್ಯುತ್ಕೃಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದ್ದು, ಮುಂಬರುವ ದಿನಗಳಲ್ಲಿ ಯಶಸ್ಸಿನ ಹೊಸ ಎತ್ತರವನ್ನು ಏರಲಿ. | ನರೇಂದ್ರ ಮೋದಿ ಪ್ರಧಾನಿ
ಕಿತ್ತೂರು ಕರ್ನಾಟಕ: ಕರ್ನಾಟಕದ ಯಾವುದೇ ಪ್ರದೇಶವನ್ನು ಹಿಂದುಳಿಯಲು ಬಿಡುವುದಿಲ್ಲ. ಜತೆಗೆ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಹೆಸರು ಬದಲಾವಣೆ ಜತೆಗೆ ಆ ಭಾಗದ ಜನರ ಬದುಕು ಹಸನಾಗಬೇಕು. ಪ್ರಗತಿ ಹೊಂದಬೇಕು. ಆ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಬೇಕು ಎಂದು ಸಿಎಂ ಹೇಳಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3 ಸಾವಿರ ಕೋಟಿ ವಿಶೇಷ ಅನುದಾನವನ್ನು ಸರ್ಕಾರ ಒದಗಿಸಲಿದೆ. ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶದ ಸಮಗ್ರ ಅಭಿವೃದ್ದಿ, ಔದ್ಯೋಗೀಕರಣಕ್ಕೆ ಸರ್ಕಾರ ಯೋಜನೆಗಳನ್ನು ರೂಪಿಸಲಿದೆ ಎಂದರು.
ಕಲೆ-ಸಂಸ್ಕೃತಿಗೆ ಪ್ರೋತ್ಸಾಹ: ಪ್ರಾಥಮಿಕ ಮತ್ತು ಪ್ರೌಢಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಓದಿದ ಶಾಲೆಗಳ ಅಭಿವೃದ್ಧಿಗಾಗಿ 16.88 ಕೋಟಿ ರೂ. ಅನುದಾನ ನೀಡಿದ್ದೇವೆ. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದು ನಮ್ಮೆಲ್ಲರ ಆದ್ಯತೆಯಾಗಿದೆ. ರಾಜ್ಯದ ಒಟ್ಟು 20,718 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 14,236 ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ. ಅದೇ ರೀತಿ ಒಟ್ಟು 22,501 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 242 ಶಾಲೆಗಳಲ್ಲಿ 35 ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ. ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸ್ಸಿನಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದ ಶಾಲಾ ಸಂಕೀರ್ಣಗಳನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆಯುಕ್ತ ಡಾ.ಆರ್.ವಿಶಾಲ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಇತರರು ಇದ್ದರು.
ಎಲ್ಲ ವಿಚಾರಗಳಲ್ಲಿಯೂ ಕನ್ನಡಕ್ಕೆ ಅಗ್ರಸ್ಥಾನ ನೀಡಿ ಕನ್ನಡಿಗರ ಬದುಕು, ಭವಿಷ್ಯವನ್ನು ಕಟ್ಟುವುದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಮುಂದಿನ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಿ, ಜನೋತ್ಸವವಾಗಬೇಕು. ಈ ಗುರಿ ತಲುಪುವವರೆಗೆ ವಿರಾಮಿಸುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೋವಿಡ್ ಕಾರಣದಿಂದ ಸೀಮಿತವಾಗಿ ರಾಜ್ಯೋತ್ಸವ ಆಚರಿಸುತ್ತಿದ್ದರೂ.. ಉತ್ಸಾಹ, ಚೈತನ್ಯ ಕುಂದಿಲ್ಲ. ಕನ್ನಡ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ. ಅದು ನಮ್ಮೆಲ್ಲರ ಬೇರು. ಈ ತಾಯಿ ಬೇರನ್ನು ಸಂರಕ್ಷಿಸಿ, ವಿಶ್ವದಲ್ಲಿ ಹೆವುನುಕುಲಕ್ಕೆ ಕನ್ನಡದ ಮಹತ್ವ, ಪ್ರಯೋಜನ ಮತ್ತು ಸ್ವಾಭಿಮಾನವನ್ನು ತಿಳಿಸುವ ಶತಮಾನವಿದು ಎಂದರು.
ಕನ್ನಡದ ಪ್ರಗತಿಯಾದರೆ ಕರ್ನಾಟಕದ ಪ್ರಗತಿಯಾಗುತ್ತದೆ. ಆಡಳಿತದಲ್ಲಿ ಕನ್ನಡ ಅನುಷ್ಠಾನ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪೊಲೀಸ್ ಕವಾಯತಿನ ನಿರ್ದೇಶನ ಸೇರಿದಂತೆ ಎಲ್ಲ ಆದೇಶಗಳನ್ನು ಕನ್ನಡದಲ್ಲಿಯೇ ನೀಡುವ ಪದ್ಧತಿಯನ್ನು ಜಾರಿಗೊಳಿಸಲಾಗುವುದು. |ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಹಿಂದಿ ಹೇರಿಕೆ ಖಂಡಿಸಿ: ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಹಿಂದಿ ಹೇರಿಕೆಯನ್ನು ಪ್ರತಿಯೊಬ್ಬ ಕನ್ನಡಿಗರೂ ಉಗ್ರವಾಗಿ ಖಂಡಿಸಬೇಕು ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದರು. ತ್ರಿಭಾಷಾ ಸೂತ್ರದ ವಿಚಾರ ಆಗಾಗ್ಗೆ ಚರ್ಚೆಯಾಗುತ್ತಾ ಬರುತ್ತಿದೆ. ದಕ್ಷಿಣದ ರಾಜ್ಯಗಳು ತ್ರಿಭಾಷಾ ಸೂತ್ರವನ್ನು ವಿರೋಧಿಸುತ್ತಲೇ ಬಂದಿವೆ. ಕನ್ನಡಿಗಾರದ ನಾವು ಕನ್ನಡವೇ ನಮ್ಮ ಮಾತೃಭಾಷೆ ಮತ್ತು ಕನ್ನಡವನ್ನೇ ನಮ್ಮ ತಾಯಿ ಎಂದು ನಂಬಿದ್ದೇವೆ. ಒಂದು ಭಾಷೆಯಾಗಿ ಹಿಂದಿ ಕಲಿಯಲು ನಮ್ಮ ವಿರೋಧವಿಲ್ಲ. ಆದರೆ, ಹಿಂದಿ ಹೇರಿಕೆಗೆ ನಮ್ಮ ವಿರೋಧವಿದೆ. ಭಾರತದ ಕೇವಲ ಶೇ.34 ಜನರಿಗೆ ಮಾತ್ರ ಹಿಂದಿ ಮಾತೃಭಾಷೆಯಾಗಿದೆ. ಉಳಿದ ಶೇ.66 ಜನರ ಮೇಲೆ ಹಿಂದಿ ಹೇರುವುದು ಪ್ರಜಾತಂತ್ರ ವಿರೋಧಿ ಕ್ರಮವಾಗಿದೆ ಎಂದರು.
ಉಡುಪಿ: ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಶೀಘ್ರದಲ್ಲೇ ಕಾನೂನು ಚೌಕಟ್ಟು ರೂಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು. ಉದ್ಯೋಗ ಸೇರಿದಂತೆ ನಾಡಿನಲ್ಲಿ ಕನ್ನಡಿಗರಿಗೆ ಆದ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಗೆ ಸಣ್ಣ ತಿದ್ದುಪಡಿ ಮಾಡಬೇಕಾಗಿದೆ. ಕರ್ನಾಟಕ ಔದ್ಯಮಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸಲು ಸರ್ಕಾರ ಕಾನೂನು ಜಾರಿಗೊಳಿಸಲಿದೆ ಎಂದರು. ರಾಜ್ಯದಲ್ಲಿ ಈ ಬಾರಿ ಸಾಧಕರನ್ನು ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಜಿಲ್ಲೆಗಳಲ್ಲೂ ಎಲೆಮರೆ ಸಾಧಕರ ಗುರುತಿಸುವ ಕಾರ್ಯ ನಡೆಯಬೇಕು. ಆದರೆ ಈ ಬಗ್ಗೆ ಯಾವುದೇ ಸುತ್ತೋಲೆಗಳಿಲ್ಲ. ಹೀಗಾಗಿ ಮುಂದಿನ ವರ್ಷದಿಂದ ಜಿಲ್ಲಾ ಮಟ್ಟದ ಪ್ರಶಸ್ತಿಗಳಿಗೆ ಏಕರೂಪದ ನಿಯಮ ಜಾರಿಗೊಳಿಸಲಾಗುವುದು ಎಂದರು.