ಕ್ರಿಪ್ಟೋ ಮಾರುಕಟ್ಟೆಗೆ ಮರ್ಮಾಘಾತ: ಹೂಡಿಕೆದಾರರಿಗೆ 74.65 ಲಕ್ಷ ಕೋಟಿ ರೂ. ನಷ್ಟ

Bit Coin
Published on
ಜಾಗತಿಕವಾಗಿ ಕ್ರೇಜ್ ಹುಟ್ಟಿಸಿರುವ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಕಳೆದ ವಾರ ಭಾರಿ ಆಘಾತ ಕಂಡಿದೆ. ಕೆಲವೇ ದಿನಗಳ ಅವಧಿಯಲ್ಲಿ ಹೂಡಿಕೆದಾರರು 1 ಲಕ್ಷ ಕೋಟಿ ಡಾಲರ್​ಗೂ ಅಧಿಕ ನಷ್ಟ ಅನುಭವಿಸಿದರು. ಬಿಟ್​ಕಾಯಿನ್ ಮೌಲ್ಯ ಕೂಡ ಶೇಕಡ 50ಕ್ಕೂ ಹೆಚ್ಚು ಕುಸಿತ ಕಂಡಿದೆ. ಈ ವಿದ್ಯಮಾನದ ಅವಲೋಕನ ಇಲ್ಲಿದೆ.

ಹೂಡಿಕೆ ಮಾಡಿದ್ರೆ ಬಿಟ್​ಕಾಯಿನ್​ನ ಮೇಲೆ ಮಾಡಬೇಕು ಎನ್ನುವ ಕಾಲ ಇದಲ್ಲ. ಅದರ ಮೌಲ್ಯ ಕಳೆದ ನವೆಂಬರ್​ನಲ್ಲಿ ಸಾರ್ವಕಾಲಿಕ ಗರಿಷ್ಠ 69,000 ಡಾಲರ್ ತಲುಪಿತ್ತು. ಆದರೆ, ಈಗ ಅಂದರೆ ಜ.24ರ ಅಪರಾಹ್ನ 2.30ಕ್ಕೆ ಅದರ ಮೌಲ್ಯ 34,907.60 ಡಾಲರ್. ಮೌಲ್ಯದ ದೃಷ್ಟಿಯಿಂದ ಬಿಟ್​ಕಾಯಿನ್ ಹೆಚ್ಚು ಕಡಿಮೆ ಶೇಕಡ 50ಕ್ಕಿಂತಲೂ ಹೆಚ್ಚು ನಷ್ಟ ಅನುಭವಿಸಿದೆ. ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯನ್ನು ಗಮನಿಸಿದರೆ ಬಿಟ್​ಕಾಯಿನ್ ಜತೆಗೆ ಎಥೇರಿಯಂ, ಫಿನಾನ್ಸ್ ಕಾಯಿನ್, ಕಾರ್ಡನೊ, ಸೊಲಾನ, ಡೋಜ್​ಕಾಯಿನ್, ಶಿಭಾ ಇನು ಇತ್ಯಾದಿ ಕ್ರಿಪ್ಟೋಕರೆನ್ಸಿಗಳು ಕೂಡ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿವೆ. ಹೀಗಾಗಿ ಒಟ್ಟಾರೆ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬೆರಳೆಣಿಕೆ ದಿನಗಳಲ್ಲಿ ಶನಿವಾರ ತನಕ ಅನುಭವಿಸಿದ ನಷ್ಟದ ಪ್ರಮಾಣ 1 ಲಕ್ಷ ಕೋಟಿ ಡಾಲರ್​ಗೂ (74.65 ಲಕ್ಷ ಕೋಟಿ ರೂಪಾಯಿ) ಹೆಚ್ಚು. ಇದೇ ವೇಳೆ, ಸೋಮವಾರ ಬಿಟ್​ಕಾಯಿನ್ ಮೌಲ್ಯ ಮತ್ತೆ ಕುಸಿತ ಕಂಡಿದ್ದು, 36,000 ಡಾಲರ್​ಗೂ ಕೆಳಗೆ ಜಾರಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದರ ಬೆಂಬಲ ಬೆಲೆ 30,000 ಡಾಲರ್. ಅಲ್ಲಿ ತನಕ ಬಿಟ್​ಕಾಯಿನ್ ಮೌಲ್ಯ ಕುಸಿತವನ್ನು ನಿರೀಕ್ಷಿಸಬಹುದು ಎಂದು ಔನ್​ದಾ ಕಂಪನಿ ಹಿರಿಯ ಮಾರುಕಟ್ಟೆ ವಿಶ್ಲೇಷಕ ಎಡ್ವರ್ಡ್ ಮೊಯಾ ಅವರ ಟಿಪ್ಪಣಿ ಹೇಳಿದೆ.

ಬಿಟ್​ಕಾಯಿನ್ ಪಾಲೇ ಹೆಚ್ಚು: ಕ್ರಿಪ್ಟೋ ಮಾರುಕಟ್ಟೆಯಲ್ಲಿ ನವೆಂಬರ್ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಒಂದು ಬಿಟ್​ಕಾಯಿನ್ ಮೌಲ್ಯ 69,000 ಡಾಲರ್ ದಾಖಲೆ ಬರೆದಿತ್ತು. ಆದರೆ ಅಲ್ಲಿಂದೀಚೆಗೆ ಅದು ಅನುಭವಿಸಿದ ನಷ್ಟದ ಕಾರಣ ಮಾರುಕಟ್ಟೆಗೆ ನಷ್ಟವಾಗಿದ್ದು 600 ಶತಕೋಟಿ ಡಾಲರ್ (44,78,940 ಕೋಟಿ ರೂಪಾಯಿ). ಇನ್ನುಳಿದ ನಷ್ಟ ಉಳಿದ ಕರೆನ್ಸಿಗಳದ್ದು.

ಟೆರರ್ ಫಂಡಿಂಗ್​ನ ಮೂಲ?: ಭಾರತ, ರಷ್ಯಾ ಸೇರಿ ಅನೇಕ ರಾಷ್ಟ್ರಗಳು ಕ್ರಿಪ್ಟೋ ಮಾರುಕಟ್ಟೆಯನ್ನು ಟೆರರ್ ಫಂಡಿಂಗ್​ನ ಮೂಲ ಎಂದೇ ಪರಿಗಣಿಸಿವೆ. ಹೀಗಾಗಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ಕಾನೂನು ಮಾನ್ಯತೆಯನ್ನು ರಷ್ಯಾ 2020ರಲ್ಲಿ ರದ್ದುಗೊಳಿಸಿತ್ತು. ಪಾವತಿಗೆ ಟೋಕನ್​ಗಳನ್ನು ಬಳಸುವುದನ್ನೂ ನಿಷೇಧಿಸಿತ್ತು. ಭಾರತದಲ್ಲೂ ಕ್ರಿಪ್ಟೋ ಕರೆನ್ಸಿಗಳ ವಹಿವಾಟಿಗೆ ಕಾನೂನು ಮಾನ್ಯತೆ ಇಲ್ಲ. ಚೀನಾ ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಷೇಧ ಹೇರಿದೆ. ಹೀಗೆ ವಿವಿಧ ದೇಶಗಳು ಈ ರೀತಿ ನಿರ್ಬಂಧ ಕ್ರಮಗಳನ್ನು ತೆಗೆದುಕೊಂಡಿವೆ.

ಸಾರ್ವಕಾಲಿಕ ಗರಿಷ್ಠ ಮೌಲ್ಯ: ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಮೌಲ್ಯ 2017ರಲ್ಲಿ 620 ಶತಕೋಟಿ ಡಾಲರ್ ಅಷ್ಟೇ ಇತ್ತು. ಕಳೆದ ವರ್ಷ ನವೆಂಬರ್​ನಲ್ಲಿ ಬಿಟ್​ಕಾಯಿನ್ ಮೌಲ್ಯ ಸಾರ್ವಕಾಲಿಕ ಎತ್ತರ 69,000 ಡಾಲರ್ ತಲುಪಿದಾಗ ಕ್ರಿಪ್ಟೋ ಮಾರುಕಟ್ಟೆ ಮೌಲ್ಯವೂ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿತ್ತು. ಅಂದರೆ ಅಂದಾಜು 3 ಲಕ್ಷ ಕೋಟಿ ಡಾಲರ್ (224 ಲಕ್ಷ ಕೋಟಿ ರೂಪಾಯಿ) ಮೌಲ್ಯ ತಲುಪಿತ್ತು.

ಇಂದು-ನಾಳೆ ಫೆಡರಲ್ ರಿಸರ್ವ್ ಸಭೆ: ಅಮೆರಿಕದ ಫೆಡರಲ್ ರಿಸರ್ವ್​ನ ಮಹತ್ವದ ಸಭೆ ಮಂಗಳವಾರ ಮತ್ತು ಬುಧವಾರ ನಡೆಯಲಿದೆ. ಹೀಗಾಗಿ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿ ಸೋಮವಾರ ಸಂಜೆ ವೇಳೆಗೆ ಹೊಸ ಭರವಸೆ ಗೋಚರಿಸಿದೆ. ಕ್ರಿಪ್ಟೋಕಾರ್ಟ್ ಪ್ರಕಾರ ಟಾಪ್ 10 ಡಿಜಿಟಲ್ ಟೋಕನ್​ಗಳ ಪೈಕಿ ಸೊಲಾನಾ ಬಿಟ್ಟು ಉಳಿದ ಒಂಬತ್ತು ಕ್ರಿಪ್ಟೋ ಕರೆನ್ಸಿಗಳ ವಹಿವಾಟಿನಲ್ಲಿ ಚೇತರಿಕೆ ಕಂಡುಬಂದಿತ್ತು. ಆದರೆ ಇದು ಪದೇಪದೆ ಬದಲಾಗುತ್ತಿರುವ ಕಾರಣ ನಿಖರವಾಗಿ ಈ ಮಾರುಕಟ್ಟೆಯ ಪ್ರಗತಿಯ ಬಗ್ಗೆ ಹೇಳಲಾಗದು.

ಯುವಜನರೇ ಹುಷಾರು!: ಬಿಟ್​ಕಾಯಿನ್ ಹಾಗೂ ಇತರ ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೂಡಿಕೆ ಮಾಡುವವರಲ್ಲಿ ಯುವಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ತಂತ್ರಜ್ಞಾನದ ತಿಳಿವಳಿಕೆ, ಮಾರ್ಕೆಟ್ ಕ್ರೇಜ್, ದಿಢೀರ್ ಹಣಗಳಿಸುವ ಆಸೆ ಮತ್ತಿತರ ಕಾರಣದಿಂದ ಭಾರಿ ಪ್ರಮಾಣದಲ್ಲಿ ಹೂಡುತ್ತಿದ್ದಾರೆ. ಆದರೆ ಬಹುತೇಕ ದೇಶಗಳಲ್ಲಿ ಕ್ರಿಪ್ಟೋಗೆ ಕಾನೂನುಬದ್ಧ ಮಾನ್ಯತೆ ಇಲ್ಲದಿರುವುದರಿಂದ, ಈ ಅಸಾಂಪ್ರದಾಯಿಕ, ಚಂಚಲ ಮಾರುಕಟ್ಟೆಯನ್ನು ನಂಬಿಕೊಂಡು ಹಣ ಹಾಕುವುದು ಅಪಾಯಕಾರಿ ಜೂಜಾಟವಾಗಬಹುದು ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.

ಕುಸಿತಕ್ಕೆ ಕಾರಣ

  1. ಕ್ರಿಪ್ಟೋ ಕರೆನ್ಸಿಗಳ ವಹಿವಾಟು ಮತ್ತು ಮೈನಿಂಗ್ ಅನ್ನು ರಷ್ಯಾದ ಭೌಗೋಳಿಕ ವ್ಯಾಪ್ತಿಯಲ್ಲಿ ನಿಷೇಧಿಸಬೇಕು ಎಂದು ರಷ್ಯಾದ ಸೆಂಟ್ರಲ್ ಬ್ಯಾಂಕ್ ಅಲ್ಲಿನ ಸರ್ಕಾರಕ್ಕೆ ಶುಕ್ರವಾರ ಶಿಫಾರಸು ಮಾಡಿತ್ತು. ಕೂಡಲೇ ಇದರ ಪರಿಣಾಮ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯ ಹೂಡಿಕೆದಾರರ ಸೆಂಟಿಮೆಂಟ್ ಮೇಲೆ ಆಗಿದ್ದವು. ಬಿಟ್​ಕಾಯಿನ್ ಹಾಗೂ ಇತರೆ ಕ್ರಿಪ್ಟೋ ಕರೆನ್ಸಿಗಳ ಮೇಲೆ ಮಾಡಿದ್ದ ಹೂಡಿಕೆಗಳನ್ನು ಹಿಂಪಡೆಯಲಾರಂಭಿಸಿದರು.
  2. ಫೆಡರಲ್ ರಿಸರ್ವ್ ಕಠಿಣ ನಿಲುವು - ಸ್ಥೂಲ ಆರ್ಥಿಕ ಪರಿಸ್ಥಿತಿಯ ವಿಸ್ತರಣೆಯ ಪರಿಸ್ಥಿತಿ ಮತ್ತು ಮಾರ್ಚ್ ತಿಂಗಳು ಸಮೀಪಿಸುತ್ತಿರುವಂತೆ ಬಡ್ಡಿದರ ಏರಿಕೆಯಂತಹ ಕಠಿಣ ನಿಲುವು ತಾಳುವ ಮುನ್ಸೂಚನೆಯನ್ನು ಫೆಡರಲ್ ರಿಸರ್ವ್ ತೆಗೆದುಕೊಂಡಿದೆ. ಅಮೆರಿಕದಲ್ಲಿ ಎಲ್ಲ ಟೆಕ್ನಾಲಜಿ ಕಂಪನಿಗಳ ನಿರೀಕ್ಷಿತ ಆದಾಯ ಸಂಗ್ರಹವಾಗಿಲ್ಲ. ಹಣದುಬ್ಬರ ಪ್ರಮಾಣ 4 ದಶಕಗಳ ಗರಿಷ್ಠ ಮಟ್ಟ ತಲುಪಿರುವುದು ಕೂಡ ಪರಿಣಾಮ ಬೀರಿದೆ. ವಾಲ್​ಸ್ಟ್ರೀಟ್ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಹುಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಲಾರಂಭಿಸಿರುವುದು, ಸಾಂಪ್ರದಾಯಿಕ ಷೇರುಪೇಟೆ ಜತೆಗೆ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಗಳ ನಂಟು ಹೆಚ್ಚಾಗುತ್ತಿರುವುದು ಕೂಡ ಗಮನಾರ್ಹ.
  3. ದೀರ್ಘಾವಧಿ ಲಾಭದ ನಿರೀಕ್ಷೆ ಹುಸಿ: ಅನೇಕ ಹೂಡಿಕೆದಾರರು ದೀರ್ಘಾವಧಿಯ ಲಾಭದ ನಿರೀಕ್ಷೆಗಳನ್ನು ಇರಿಸಿಕೊಂಡು ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಆದರೆ, ನವೆಂಬರ್ ತಿಂಗಳಿಂದೀಚೆಗೆ ಬದಲಾದ ಸನ್ನಿವೇಶದಲ್ಲಿ ದೀರ್ಘಾವಧಿ ಲಾಭದ ನಿರೀಕ್ಷೆ ಹುಸಿ ಎನಿಸಿತೊಡಗಿದೆ. ಹೀಗಾಗಿ ಕ್ರಿಪ್ಟೋ ಕರೆನ್ಸಿಗಳ ಮಾರಾಟ ಹೆಚ್ಚಾಗಿದೆ ಎನ್ನುತ್ತಿದೆ ಕಾಯಿನ್​ಡೆಸ್ಕ್​ನ ವರದಿ. ಅದೇ ರೀತಿ ಶುಕ್ರವಾರ ಒಂದೇ ದಿನ ದೀರ್ಘಾವಧಿ ಹೂಡಿಕೆಯ ಉದ್ದೇಶದ ಕ್ರಿಪ್ಟೋ ಕರೆನ್ಸಿಗಳ ನಗದೀಕರಣ ಮೌಲ್ಯ 100 ಕೋಟಿ ಡಾಲರ್ (7465 ಕೋಟಿ ರೂ.) ಆಗಿತ್ತು. ಇದರಲ್ಲಿ ಬಿಟ್​ಕಾಯಿನ್ ನಗದೀಕರಣವೇ 250 ದಶಲಕ್ಷ ಡಾಲರ್, ಎಥೀರಿಯಂ ನಗದೀಕರಣ ಪ್ರಮಾಣ 160 ದಶಲಕ್ಷ ಡಾಲರ್ ಇತ್ತು.

ಭಾರತೀಯರ ಖಾತೆ ಹೆಚ್ಚು: ಜಗತ್ತಿನ ಕ್ರಿಪ್ಟೋಕರೆನ್ಸಿ ಗ್ರಾಹಕರ ಪೈಕಿ ಭಾರತೀಯರೇ 10.07 ಕೋಟಿ ಖಾತೆಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ. ಅಮೆರಿಕನ್ನರ ಖಾತೆ 2.74 ಕೋಟಿ ಇದ್ದು, ರಷ್ಯನ್ನರು 1.74 ಕೋಟಿ, ನೈಜೀರಿಯಾದವರು 1.3 ಕೋಟಿ ಖಾತೆ ಹೊಂದಿದ್ದಾರೆ ಎಂದು ಬ್ರೋಕರ್​ಚೂಸರ್ ಹೇಳಿದೆ.

ಬಿಟ್​ಕಾಯಿನ್ ಅಥವಾ ಯಾವುದೇ ಕ್ರಿಪ್ಟೋ ಕರೆನ್ಸಿ ಇರಬಹುದು, ಅವುಗಳು ಅಪರಾಧ ಜಗತ್ತಿನ ವಶವಾಗದಂತೆ ನೋಡಿಕೊಳ್ಳಬೇಕು. ನಮ್ಮ ಯುವಜನರು ಅದರ ಸುಳಿಗೆ ಸಿಲುಕಿ ನಾಶವಾಗಬಾರದು. ಈ ನಿಟ್ಟಿನಲ್ಲಿ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ಕ್ರಮ ತೆಗೆದುಕೊಳ್ಳಬೇಕಾದ್ದು ಮುಖ್ಯ. | ನರೇಂದ್ರ ಮೋದಿ ಪ್ರಧಾನಿ (ಕಳೆದ ತಿಂಗಳು ನೀಡಿದ ಮೊದಲ ಸಾರ್ವಜನಿಕ ಪ್ರತಿಕ್ರಿಯೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net