70ರ ವೃದ್ಧನಿಗೆ 13 ವರ್ಷದ ಮಗಳನ್ನು ಕೊಟ್ಟು ಮದುವೆ ಮಾಡಿದ ತಂದೆ!

Old Man Marriage
Published on

ಇಸ್ಲಮಾಬಾದ್​: ಹದಿಮೂರು ವರ್ಷದ ಬಾಲೆಯನ್ನು ಮದುವೆಯಾದ 70 ವರ್ಷದ ವೃದ್ಧನನ್ನು ಬಂಧಿಸಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ನಲ್ಲಿ ನಡೆದಿದೆ.

ಬಾಲಕಿಯನ್ನು ಆಕೆಯ ತಂದೆಯೇ ಮುದುಕನಿಗೆ ಮದುವೆ ಮಾಡಿಕೊಟ್ಟಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಾಲಕಿಯ ತಂದೆ ಹಾಗೂ ವೃದ್ಧನನ್ನು ಬಂಧಿಸಿದ್ದಾರೆ. ಅಲ್ಲದೆ, ಮದುವೆ ಸಮಾರಂಭದ ಆಯೋಜಕರು ಮತ್ತು ಸಾಕ್ಷಿಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಆತಂಕಕಾರಿ ಘಟನೆಯು ಬಾಲ್ಯ ವಿವಾಹದ ನಿರಂತರ ಸವಾಲನ್ನು ಒತ್ತಿಹೇಳುತ್ತದೆ. ಇದು ಪಾಕಿಸ್ತಾನದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ ಹೆಣ್ಣು ಮಕ್ಕಳ ಯೋಗಕ್ಷೇಮಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಇತ್ತೀಚಿನ ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ.

ಪಾಕಿಸ್ತಾನ ಸರ್ಕಾರವು ಹಳೆಯ ವಿವಾಹ ಕಾನೂನುಗಳನ್ನು ಅನುಸರಿಸುತ್ತದೆ. 1929 ರಿಂದ ಜಾರಿಯಲ್ಲಿರುವ ಕಾನೂನಿನ ಪ್ರಕಾರ, ಹೆಣ್ಣುಮಕ್ಕಳ ಮದುವೆಯ ವಯಸ್ಸು 16 ಮತ್ತು ಹುಡುಗರ ವಯಸ್ಸು 18ಕ್ಕೆ ನಿಗದಿಪಡಿಸಲಾಗಿದೆ. ಬಾಲ್ಯವಿವಾಹಗಳು ಹೆಚ್ಚು ವರದಿಯಾಗಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 18 ಕ್ಕೆ ಏರಿಸಲು ಸಾಕಷ್ಟು ಪ್ರಯತ್ನಗಳು ನಡೆಯಿತು. ಆದರೆ, ಸಂಪ್ರದಾಯವಾದಿ ಗುಂಪುಗಳ ಪ್ರತಿಭಟನೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net