ನಕಲಿ ಕ್ಯಾನ್ಸರ್ ಔಷಧಿ ತಯಾರಿಸಿ ಮಾರಾಟ ಮಾಡುತ್ತಿದ್ದವರ ಬಂಧನ: ಗ್ಯಾಂಗ್​ನ ಆದಾಯ ಕೇಳಿದ್ರೆ ಬೆರಗಾಗ್ತೀರ!

delhi
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಕಲಿ ಡ್ರಗ್ಸ್ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ನಕಲಿ ಕ್ಯಾನ್ಸರ್ ಔಷಧಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ.

ಇಬ್ಬರು ಆರೋಪಿಗಳನ್ನು ದೆಹಲಿಯ ಪ್ರಮುಖ ಆಸ್ಪತ್ರೆಯ ಉದ್ಯೋಗಿಗಳು ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಡ್ರಗ್ಸ್ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ತಂಡದಿಂದ ಒಟ್ಟು ಒಂಬತ್ತು ಕ್ಯಾನ್ಸರ್ ಔಷಧಿಗಳು, 4 ಕೋಟಿ ರೂಪಾಯಿ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.

ನಕಲಿ ಕ್ಯಾನ್ಸರ್ ಔಷಧಿಗಳ ತಯಾರಿಕೆ ಮತ್ತು ಪೂರೈಕೆಯಲ್ಲಿ ತೊಡಗಿರುವ ದಂಧೆಯ ಬಗ್ಗೆ ಅಪರಾಧ ವಿಭಾಗಕ್ಕೆ ಮಾಹಿತಿ ಬಂದ ನಂತರ ಈ ಸಂಬಂಧ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬಳಿಕ ಆರೋಪಿಗಳ ಪತ್ತೆಗೆ ತಂಡ ರಚಿಸಿಸಲಾಗಿತ್ತು.

ಈ ತಂಡ ಬರೋಬ್ಬರಿ 100 ಮೌಲ್ಯದ ಆ್ಯಂಟಿ ಫಂಗಲ್ ಔಷಧಿಯನ್ನು ಖಾಲಿ ಬಾಟಲಿಗಳಲ್ಲಿ ತುಂಬಿ 'ಜೀವರಕ್ಷಕ' ಕ್ಯಾನ್ಸರ್ ಔಷಧಿ ಎಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಚೀನಾ, ಅಮೆರಿಕದಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಈ ನಕಲಿ ಔಷಧಗಳನ್ನು ಗುರುಗ್ರಾಮ್‌ನ ಎರಡು ಪ್ಲಾಟ್‌ಗಳಲ್ಲಿ ತಯಾರಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಹೀಟ್ ಗನ್, ಹೆಚ್ಚಿನ ಸಂಖ್ಯೆಯ ಖಾಲಿ ಪೈಲ್‌ಗಳು, 800 ಕ್ಕೂ ಹೆಚ್ಚು ಪ್ಯಾಕೇಜ್ ಬಾಕ್ಸ್‌ಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಪಿಲ್ ಜೈನ್ ಈ ಗ್ಯಾಂಗ್ ನ ಪ್ರಮುಖ ಸೂತ್ರಧಾರ. ನೀರಜ್ ಚೌಹಾಣ್ ಮತ್ತು ಇತರ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಗಳಿಂದ ಖಾಲಿ ಬಾಟಲಿಗಳನ್ನು ತಂದು ಈ ನಕಲಿ ಔಷಧ ತುಂಬಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net