ಇನ್ನು ಪೇಟಿಎಂ ಫಾಸ್​ಟ್ಯಾಗ್ ಸ್ಥಗಿತ! ಮುಂದೆ ಏನು ಮಾಡಬೇಕು, ಇಲ್ಲಿದೆ ನೋಡಿ ಮಾಹಿತಿ ?

fastAG
Published on

ನವದೆಹಲಿ: ಪೇಟಿಎಂ ಫಾಸ್​ಟ್ಯಾಗ್ ಬಳಸುತ್ತಿರುವವರು ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್​ನಿಂದ ಫಾಸ್​ಟ್ಯಾಗ್ ಪಡೆಯುವಂತೆ ಎನ್​ಎಚ್​ಎಐ ಮತ್ತೊಮ್ಮೆ ಮಾಹಿತಿ ತಿಳಿಸಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ಹಾಕಿರುವ ಹಿನ್ನೆಲೆಯಲ್ಲಿ ಅದರ ಫಾಸ್​ಟ್ಯಾಗ್​ಗೂ ಹೊಡೆತ ಬಿದ್ದಿದೆ. ಪೇಟಿಎಂನ ಫಾಸ್​ಟ್ಯಾಗ್ ಪೇಮೆಂಟ್ಸ್ ಬ್ಯಾಂಕ್​ಗೆ ಜೋಡಿತವಾಗಿರುವುದರಿಂದ ಅದಕ್ಕೂ ನಿರ್ಬಂಧ ಅನ್ವಯ ಆಗುತ್ತದೆ. ಇದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ದಂಡ ಅಥವಾ ಯಾವುದೇ ದುಪ್ಪಟ್ಟು ಶುಲ್ಕವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಟೋಲ್ ಪ್ಲಾಜಾಗಳಲ್ಲಿ ಅನಾನುಕೂಲತೆ ಇಲ್ಲದೆ ತಡೆರಹಿತ ಪ್ರಯಾಣದ ಅನುಭವವನ್ನು ಪಡೆಯಬಹುದು ಎಂದು ಹೇಳಿದೆ.

ಹೊಸ ಫಾಸ್​ಟ್ಯಾಗ್ ತೆಗೆದುಕೊಳ್ಳದಿದ್ದರೆ ಏನಾಗುತ್ತದೆ?: ನಿಮ್ಮ ಬಳಿ ಪೇಟಿಎಂ ಫಾಸ್​ಟ್ಯಾಗ್ ಇದ್ದು, ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್​ನ ಫಾಸ್​ಟ್ಯಾಗ್ ಪಡೆಯಬೇಕಾಗುತ್ತದೆ. ಮಾರ್ಚ್ 15ರ ನಂತರ ಅದು ನಿಷ್ಕ್ರಿಯಗೊಳ್ಳುವುದಿಲ್ಲ. ಆ ಖಾತೆಯಲ್ಲಿ ಹಣ ಇದ್ದರೆ ಅದು ಮುಗಿಯುವವರೆಗೂ ಬಳಸಬಹುದು. ಮಾರ್ಚ್ 15ರ ಬಳಿಕ ಹಣ ರೀಚಾರ್ಜ್​ ಮಾಡಲಾಗುವುದಿಲ್ಲ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ಹೇರಿದ ಬಳಿಕ ಪೇಟಿಎಂ ಸಂಸ್ಥೆ ಕೂಡ ತನ್ನ ಫಾಸ್​ಟ್ಯಾಗ್ ಗ್ರಾಹಕರಿಗೆ ಬೇರೆ ಟ್ಯಾಗ್ ಪಡೆಯುವಂತೆ ಸಲಹೆ ನೀಡುತ್ತಲೇ ಬಂದಿದೆ.

ಫಾಸ್​ಟ್ಯಾಗ್ ಏನು ಕೆಲಸ ನಿರ್ವಹಿಸುತ್ತೆ: ಹೆದ್ದಾರಿಗಳಲ್ಲಿ ಸುಂಕ ಸಂಗ್ರಹಕ್ಕೆಂದು ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ನೀಡಲಾಗುವ ಪ್ರೀಪೇಯ್ಡ್ ಯಂತ್ರ. ರೇಡಿಯೋ ಫ್ರೀಕ್ವೆನ್ಸಿ ಐಡಿ ತಂತ್ರಜ್ಞಾನ ಬಳಸಲಾಗುತ್ತದೆ. ಫಾಸ್​ಟ್ಯಾಗ್ ಖಾತೆಗೆ ಎಷ್ಟಾದರೂ ಹಣವನ್ನು ಮುಂಚಿತವಾಗಿ ರೀಚಾರ್ಜ್ ಮಾಡಬಹುದು. ಹೆದ್ದಾರಿಯಲ್ಲಿ ಟೋಲ್ ಬೂತ್ ಸಮೀಪ ಸ್ವಯಂಚಾಲಿತವಾಗಿ ಫಾಸ್​ಟ್ಯಾಗ್ ಮೂಲಕ ಟೋಲ್ ಹಣ ಕಡಿತವಾಗುತ್ತದೆ.

ಎಲ್ಲಿ ಪಡೆಯಬಹುದು?: ಹೆದ್ದಾರಿ ಪ್ರಾಧಿಕಾರವು ಪ್ರಮುಖ 37 ಬ್ಯಾಂಕುಗಳಿಗೆ ಫಾಸ್​ಟ್ಯಾಗ್ ನೀಡಲು ಅನುಮತಿಸಿದೆ. ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ ಹೀಗೆ ಎಲ್ಲಾ ಪ್ರಮುಖ ಬ್ಯಾಂಕುಗಳ ಮೂಲಕ ಫಾಸ್​ಟ್ಯಾಗ್ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net