

ಸಾಗರ: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಡಿ.6ರಂದು ಬೆಳಗ್ಗೆ 10.30ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ನಾಗರಾಜ್ ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮ ಉದ್ಘಾಟಿಸುವರು. ದಲಿತ ಮುಖಂಡ ನಾರಾಯಣ ಮಂಡಗಳಲೆ, ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಜಿಲ್ಲಾ ಸಂಚಾಲಕ ಏಳುಕೋಟಿ, ಉಪವಿಭಾಗಾಧಿಕಾರಿ ಆರ್.ಯತೀಶ್, ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಪ್ರಮುಖರಾದ ಸಂತೋಷಕುಮಾರ್, ರಾಮಣ್ಣ ಹಸಲರು, ಲಲಿತಮ್ಮ, ಡಿ.ಸತೀಶ್ ಇತರರು ಪಾಲ್ಗೊಳ್ಳುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕು ಆಡಳಿತ ಅಂಬೇಡ್ಕರ್ ಜಯಂತಿಯನ್ನು ನೆಪಮಾತ್ರಕ್ಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ನಮ್ಮ ಸಮಿತಿ ಪರಿನಿರ್ವಾಣ ದಿನ ಆಚರಿಸುವ ಮೂಲಕ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಿದೆ. ಡಾ. ಅಂಬೇಡ್ಕರ್ ಸಂವಿಧಾನ ನೀಡುವ ಮೂಲಕ ಎಲ್ಲ ಸಮುದಾಯಗಳು ಸಾಮಾಜಿಕ ನ್ಯಾಯ ಪಡೆಯಲು ಕಾರಣರಾಗಿದ್ದಾರೆ. ಸುಮಾರು 52 ಜಾತಿಗಳು ಅಂಬೇಡ್ಕರ್ ನೀಡಿರುವ ಸಂವಿಧಾನದಿಂದ ಸೌಲಭ್ಯ ಪಡೆದಿದ್ದಾರೆ ಎಂದರು.
ದಲಿತ ಮುಖಂಡ ಎಲ್.ಚಂದ್ರಪ್ಪ ಮಾತನಾಡಿ, ದೇಶಕ್ಕೆ ಅಂಬೇಡ್ಕರ್ ನೀಡಿರುವ ಕೊಡುಗೆಯನ್ನು ಕಾಲಕಾಲಕ್ಕೆ ಸ್ಮರಿಸದಿದ್ದರೆ ನಾವು ಕ್ಷಮಿಸಲಾರದ ತಪ್ಪು ಮಾಡಿದಂತಾಗುತ್ತದೆ. ಅಂಬೇಡ್ಕರ್ ಆಶಯವನ್ನು ಯುವಜನರಿಗೆ ತಿಳಿಸಿಕೊಡಲು ಇಂತಹ ದಿನಾಚರಣೆ ಹೆಚ್ಚು ಮಹತ್ವ ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಡಿ.6ರಂದು ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ನಗರಸಭೆ ಸದಸ್ಯ ಎನ್.ಲಲಿತಮ್ಮ, ದಲಿತ ಮುಖಂಡ ನಾರಾಯಣ ಮಂಡಗಳಲೆ, ಶಿವಪ್ಪ ಗುಡ್ಡೆಕೌತಿ, ಸುರೇಶಕುಮಾರ್, ಗಣಪತಿ, ವೀರೇಶ್ ಇದ್ದರು.