

ವಾಷಿಂಗ್ಟನ್: ಅಮೆರಿಕ ವಾಯುಪಡೆ ಮುಂದಿನ ತಲೆಮಾರಿನ ಯುದ್ಧ ವಿಮಾನವನ್ನು ಗೌಪ್ಯವಾಗಿ ಅಭಿವೃದ್ಧಿ ಪಡಿಸಿ, ಯಶಸ್ವಿಯಾಗಿ ಪ್ರಯೋಗಿಸಿದೆ ಎಂದು ವರದಿಯಾಗಿದೆ. ಆರನೇ ತಲೆಮಾರಿನ ಯುದ್ಧ ವಿಮಾನ ಇದಾಗಿದ್ದು, ವಿಶ್ವದಲ್ಲೇ ಅತಿ ಶಕ್ತಿಶಾಲಿ ಹಾಗೂ ವೇಗ ಹೊಂದಿದೆ ಎಂದು ಅಮೆರಿಕದ ಡಿಫೆನ್ಸ್ ನ್ಯೂಸ್ ವರದಿ ಮಾಡಿದೆ.
ಅಮೆರಿಕ ವಾಯುಪಡೆಯಲ್ಲಿ ಪ್ರಸ್ತುತ ಎಫ್ - 22 ಸ್ಟೆಲ್ತ್ ಯುದ್ಧ ವಿಮಾನಗಳು ಅತ್ಯಾಧುನಿಕವಾಗಿವೆ. ಇದರ ಮುಂದುವರಿದ ಶ್ರೇಣಿಯಾಗಿ 6ನೇ ತಲೆಮಾರಿನ ಯುದ್ಧ ವಿಮಾನ ಬಳಕೆಗೆ ಬರಲಿದೆ ಎನ್ನಲಾಗಿದೆ. ಮಾನವ ಸಹಿತ ಹಾಗೂ ಮಾನವ ರಹಿತ ಎರಡೂ ರೀತಿಯ ಯುದ್ಧ ವಿಮಾನಗಳನ್ನು ಸೇನೆ ಅಭಿವೃದ್ಧಿ ಮಾಡುತ್ತಿದೆ. 2025ರ ವೇಳೆಗೆ ಈ ಯುದ್ಧ ವಿಮಾನಗಳು ಸೇನೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಯೋಜನೆಗೆ 8 ಬಿಲಿಯನ್ ಡಾಲರ್ (-ಠಿ; 58,872 ಕೋಟಿ) ವೆಚ್ಚವಾಗುವ ಸಾಧ್ಯತೆ ಇದೆ.
ಡ್ರೋನ್, ಲೇಸರ್ ಅಸ್ತ್ರ
ನೂತನ ಯುದ್ಧ ವಿಮಾನದಲ್ಲಿ ಡ್ರೋನ್ ಹಾಗೂ ಲೇಸರ್ ಅಸ್ತ್ರಗಳನ್ನು ಅಳವಡಿಕೆ ಮಾಡುವ ಸಾಧ್ಯತೆ ಇದೆ. ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯನ್ನು ಸುಲಭವಾಗಿ ನಡೆಸಲು ಇದರಿಂದ ಅನುಕೂಲವಾಗಲಿದೆ. ಕೃತಕಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಯನ್ನು ಇದರಲ್ಲಿ ಅಳವಡಿಕೆ ಮಾಡಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.