ಕರೊನಾ ಟೈಮಲ್ಲೂ ಮದ್ಯ ಸುಗ್ಗಿ!; 2 ವರ್ಷದಲ್ಲಿ 686 ಹೊಸ ಅಂಗಡಿ ಓಪನ್, ನಿಯಮ ಉಲ್ಲಂಘಿಸಿ ಲೈಸೆನ್ಸ್?

Alcohol
Published on

| ಹರೀಶ್ ಬೇಲೂರು ಬೆಂಗಳೂರು

ಕರೊನಾ ಅವಧಿಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳು ಹಿನ್ನಡೆ ಕಂಡಿದ್ದರೆ ಅಬಕಾರಿ ವಲಯ ಮಾತ್ರ ಹುಲುಸಾಗಿ ಬೆಳೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಒಟ್ಟಾರೆ ಎರಡು ವರ್ಷದ ಅವಧಿಯಲ್ಲಿ ರಾಜ್ಯದ ವಿವಿಧೆಡೆ 686 ಹೊಸ ಮದ್ಯದಂಗಡಿಗಳನ್ನು ತೆರೆಯಲು ಅಬಕಾರಿ ಇಲಾಖೆ ಪರವಾನಗಿ ನೀಡಿದೆ. ವೈನ್​ಶಾಪ್ (ಸಿಎಲ್2), ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9) ಹೊರತುಪಡಿಸಿ ಕಳೆದ 2 ವರ್ಷಗಳಲ್ಲಿ 377 ಸಿಎಲ್-7 (ಹೋಟೆಲ್ ಮತ್ತು ವಸತಿಗೃಹ), 109 ಪಬ್ ಹಾಗೂ 200 ಎಂಎಸ್​ಐಎಲ್ (11ಸಿ) ಸೇರಿ ಒಟ್ಟು 686 ಮದ್ಯದಂಗಡಿಗಳಿಗೆ ಪರವಾನಗಿ ದೊರೆತಿದೆ. ಕ್ಲಬ್ (ಸಿಎಲ್4), ಸ್ಟಾರ್ ಹೋಟೆಲ್ (ಸಿಎಲ್6ಎ), ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8) ಇನ್ನಿತರ ಮಾದರಿಗಳ ಮದ್ಯದಂಗಡಿ ಇದರಲ್ಲಿವೆ. ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ ಮತ್ತು ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚು ಸಿಎಲ್ 7 ಅಂಗಡಿಗಳನ್ನು ತೆರೆಯಲಾಗುತ್ತಿದೆ. ಹೊಸದಾಗಿ ಸಿಎಲ್7 ಮಂಜೂರಾತಿಗೆ ಈಗಾಗಲೇ ನೂರಾರು ಅರ್ಜಿಗಳು ಸಲ್ಲಿಕೆಯಾಗಿವೆ. ರಾಜಕೀಯ ಮುಖಂಡರು, ಶಾಸಕರು, ಸಚಿವರ ಬೆಂಬಲಿಗರೇ ಹೆಚ್ಚಾಗಿ ಮದ್ಯದಂಗಡಿ ತೆರೆಯುತ್ತಿದ್ದಾರೆಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮಾನದಂಡ ಉಲ್ಲಂಘನೆ?: ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶ ಮದ್ಯ ಮಾರಾಟ) ನಿಯಮ 1968ರ ರೂಲ್3(7) ಪ್ರಕಾರ ವಸತಿ ಗೃಹದಲ್ಲಿ ತಂಗುವ ಗ್ರಾಹಕರಿಗೆ ಹಾಗೂ ಅವರ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಲು ಅವಕಾಶವಿದೆ. ಆದ್ದರಿಂದ, ಮಹಾನಗರ ಪಾಲಿಕೆಯ ಪ್ರದೇಶದ ವಸತಿ ಗೃಹದಲ್ಲಿ ಕನಿಷ್ಠ 15 ಡಬಲ್ ರೂಂ, ಇತರ ಪ್ರದೇಶಗಳಲ್ಲಿನ ವಸತಿ ಗೃಹದಲ್ಲಿ ಕನಿಷ್ಠ 10 ಡಬಲ್ ರೂಂ, ಹಾಲ್, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಹೊಂದಿರಬೇಕಾಗುತ್ತದೆ. ನಿಗದಿತ ಸನ್ನದು ಶುಲ್ಕ ಪಾವತಿಸಿ ಯಾರು ಬೇಕಾದರೂ ಲೈಸೆನ್ಸ್​ಗೆ ಅರ್ಜಿ ಸಲ್ಲಿಸಬಹುದು. ಆದರೆ, ಲೈಸೆನ್ಸ್ ನೀಡುವ ವೇಳೆ ಕೆಲ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಪರವಾನಗಿ ಕೊಟ್ಟಿರುವ ಬಗ್ಗೆ ಗಂಭೀರ ಆರೋಪಗಳಿವೆ.

ರಾಜ್ಯದಲ್ಲಿವೆ 11,565 ಮದ್ಯದಂಗಡಿ: ರಾಜ್ಯದಲ್ಲಿ ಸದ್ಯ 11,565 ಮದ್ಯದಂಗಡಿಗಳಿವೆ. ಈ ಪೈಕಿ ಬೆಂಗಳೂರಲ್ಲೇ ಅತಿ ಹೆಚ್ಚು 3,609 (ಶೇ.45) ಮದ್ಯದಂಗಡಿಗಳಿವೆ. ಇವೂ ಸೇರಿ ರಾಜ್ಯದಲ್ಲಿ 3,974 ವೈನ್​ಶಾಪ್(ಸಿಎಲ್2), 266 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ (ಸಿಎಲ್6ಎ), 1,636 ಹೋಟೆಲ್ ಮತ್ತು ವಸತಿ ಗೃಹ, 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,622 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9), 917 ಎಂಎಸ್​ಐಎಲ್(ಸಿಎಲ್11ಸಿ), 610 ಆರ್​ವಿಬಿ ಇವೆ.

ಭರ್ಜರಿ ಆದಾಯ: 2016-17ರಲ್ಲಿ 16,483 ಕೋಟಿ ರೂ.ಇದ್ದ ಅಬಕಾರಿ ಆದಾಯ 2021-22ರಲ್ಲಿ 24,500 ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರತಿ ವರ್ಷ ಅಬಕಾರಿ ಆದಾಯದಲ್ಲಿ ಸರಾಸರಿ 2 ಸಾವಿರ ಕೋಟಿ ರೂ.ನಂತೆ ಹೆಚ್ಚಳವಾಗುತ್ತಿದೆ. ಕಳೆದ 5 ವರ್ಷದಲ್ಲಿ 8 ಸಾವಿರ ಕೋಟಿ ರೂ.ಆದಾಯ ಏರಿಕೆಯಾಗಿದೆ. ಮದ್ಯದ ಮೇಲೆ ಸ್ಲ್ಯಾಬ್ ಬೆಲೆ ಏರಿಕೆ ಹಾಗೂ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದು ಬರುತ್ತಿದೆ.

11ಸಿ ಹೆಚ್ಚಳ: ರಾಜ್ಯದಲ್ಲಿ ಕಳ್ಳಬಟ್ಟಿ, ಅಕ್ರಮ ಮದ್ಯ ಹಾಗೂ ನಕಲಿ ಮದ್ಯದ ಹಾವಳಿ ತಡೆಗಟ್ಟಲು ಹಾಗೂ ಗ್ರಾಮೀಣ ಭಾಗದಲ್ಲಿ ಮದ್ಯಕ್ಕೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ, ಸ್ಥಗಿತಗೊಂಡಿದ್ದ 238 ವೈನ್​ಶಾಪ್ ಹಾಗೂ 225 ಬಾರ್ ಆಂಡ್ ರೆಸ್ಟೋರೆಂಟ್ ಸೇರಿ ಒಟ್ಟು 463 ಸನ್ನದುಗಳನ್ನು 2009ರಲ್ಲಿ ಆಗಿನ ಸರ್ಕಾರ ಎಂಎಸ್​ಐಎಲ್ ಪರವಾನಗಿ ಮಾರ್ಪಾಡುಗೊಳಿಸಿ ತೆರೆಯಲು ಅನುಮತಿ ನೀಡಿತ್ತು. ಇವುಗಳಲ್ಲಿ 419 ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 38 ಅಂಗಡಿಗಳು ಸ್ಥಳ ಸಿಗದೆ ಕಾರ್ಯಾರಂಭ ಮಾಡಿರಲಿಲ್ಲ. 2016ರಲ್ಲಿ ಅಂದಿನ ಸರ್ಕಾರ ಮಂಜೂರಾತಿ ನೀಡಿದ್ದ ಹೊಸದಾಗಿ 900 ಎಂಎಸ್​ಐಎಲ್ ಮದ್ಯದಂಗಡಿಗಳ ಪೈಕಿ 441 ಅಂಗಡಿಗಳು ತೆರೆದಿದ್ದವು. ಜಾಗ ಸಿಗದೆ ಬಾಕಿ ಉಳಿದಿರುವ 459 ಅಂಗಡಿಗಳ ಪೈಕಿ 200 ಅಂಗಡಿಗಳು ಕರೊನಾ ವೇಳೆಯಲ್ಲಿ ಕಾರ್ಯಾರಂಭ ಮಾಡಿವೆ.

1,532 ಪಬ್​ಗಳು: ರಾಜ್ಯಾದ್ಯಂತ ಒಟ್ಟು 1,532 ಪಬ್​ಗಳಿವೆ. ಇದರಲ್ಲಿ ಶೇ. 90 ಅಂದರೆ 942 ಪಬ್​ಗಳು ಬೆಂಗಳೂರಿನಲ್ಲಿವೆ. ಮೈಸೂರಿನಲ್ಲಿ 67 ಹಾಗೂ ದಕ್ಷಿಣ ಕನ್ನಡದಲ್ಲಿ 57 ಪಬ್​ಗಳಿವೆ. 2019-20ರಲ್ಲಿ 88 ಹಾಗೂ 2020-21ರಲ್ಲಿ 21 ಸೇರಿ ಒಟ್ಟು 109 ಹೊಸ ಪಬ್ ಆರಂಭಿಸಲು ಪರವಾನಗಿ ನೀಡಲಾಗಿದೆ.

ಎರಡು ಕೋಟಿ ರೂ.ಬೇಕು: ಹೊಸದಾಗಿ ಸಿಎಲ್ 7 ಮದ್ಯದಂಗಡಿ ತೆರೆಯಲು ಅಂದಾಜು 2 ಕೋಟಿ ರೂ.ಬಂಡವಾಳ ಬೇಕಾಗುತ್ತದೆ. ಇಲಾಖೆಯ ಅಧಿಕಾರಿಗಳಿಗೆ ಲಕ್ಷಾಂತರ ರೂ.ಲಂಚ ಸೇರಿ ಇನ್ನಿತರ ಖರ್ಚು ವೆಚ್ಚಕ್ಕೆ ಇಷ್ಟು ಹಣ ಬೇಕಾಗುತ್ತದೆ ಎಂಬುದು ಉದ್ಯಮದ ಆಳಅಗಲ ಬಲ್ಲವರ ಮಾತು.

ಯಾವುದಕ್ಕೆ ಅನುಮತಿ?: 377-ಹೋಟೆಲ್, ವಸತಿಗೃಹ; 200-ಎಂಎಸ್​ಐಎಲ್; 109- ಪಬ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net