ಅಂಗಡಿಗೆ ಹೋದ ಆರು ವರ್ಷದ ಬಾಲಕಿ ಮನೆಗೆ ಬಂದಿದ್ದು ಭೀಕರ ಸ್ಥಿತಿಯಲ್ಲಿ; ಪಾಲಕರ ಗೋಳಾಟ...

Crime 23 april 20
Published on

ಭೋಪಾಲ್​: ಇದು ಮಧ್ಯಪ್ರದೇಶದಲ್ಲಿ ನಡೆದ ದುರ್ಘಟನೆ. ಪಾಪಿಗಳಿಗೆ, ಕಾಮುಕರಿಗೆ ಯಾವ ಕರೊನಾನೂ ಬಾಧಿಸುವುದಿಲ್ಲವಾ ಎಂಬ ಪ್ರಶ್ನೆ ಹುಟ್ಟುವಂತಹ ಅಮಾನವೀಯ ಘಟನೆ ಇದು.

ದಾಮೋಹ್​ ಜಿಲ್ಲೆಯ ಬನ್ಸಿಪುರಾ ಗ್ರಾಮದ ಮನೆಯೊಂದರಲ್ಲಿ ಇದ್ದ ಆರುವರ್ಷದ ಬಾಲಕಿ ನಿನ್ನೆ ಸಂಜೆಯಿಂದಲೇ ನಾಪತ್ತೆಯಾಗಿದ್ದಳು. ಕಂಗಾಲಾದ ಪಾಲಕರು ಪೊಲೀಸರಿಗೆ ದೂರು ನೀಡಿದಾಗ ಹುಡುಕಾಟ ಶುರುವಾಯಿತು. ಬಳಿಕ ಇಂದು ಆಕೆ ಸಿಕ್ಕಿದ್ದು ಆಕೆಯ ಮನೆಯಿಂದ ಕೆಲವೇ ಕಿಮೀ ದೂರದಲ್ಲಿರುವ ಒಂದು ಪಾಳುಬಿದ್ದ ಮನೆಯಲ್ಲಿ.

ಬಾಲಕಿ ಸಿಕ್ಕಾಗ ಆಕೆಗೆ ಎಚ್ಚರ ಇರಲಿಲ್ಲ. ಅವಳ ಕೈ ಮತ್ತು ಕಾಲುಗಳು ಹಗ್ಗದಿಂದ ಕಟ್ಟಲ್ಪಟ್ಟಿದ್ದವು. ಮಗುವಿನ ಮೇಲೆ ಅತ್ಯಾಚಾರ ಆಗಿದೆ ಎಂದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ. ಬಾಲಕಿಯನ್ನು ಅದೆಷ್ಟರ ಮಟ್ಟಿಗೆ ಹಿಂಸೆ ನೀಡಿದ್ದಾರೆಂದರೆ ಅವಳ ಕಣ್ಣುಗುಡ್ಡೆಗಳನ್ನು ಕೀಳಲೂ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಸದ್ಯದ ಸ್ಥಿತಿ ತುಂಬ ಗಂಭೀರವಾಗಿದೆ. ಜಬಲ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ತನಿಖೆಗಾಗಿ ಎಸ್​ಐಟಿ ರಚಿಸಿದ್ದೇವೆ. ಈ ಘಟನೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿದವರಿಗೆ 10,000 ರೂ.ನೀಡುವುದಾಗಿ ಘೋಷಿಸಿದ್ದೇವೆ ಎಂದು ಸ್ಥಳೀಯ ಎಸ್​ಪಿ ತಿಳಿಸಿದ್ದಾರೆ.

ಬುಧವಾರ ಸಂಜೆ 5ಗಂಟೆಗೆ ಬಾಲಕಿ ನಮ್ಮ ಮನೆಯ ಪಕ್ಕದಲ್ಲೇ ಇರುವ ಅಂಗಡಿಗೆ ಹೋಗಿದ್ದಳು. ಅಲ್ಲಿಂದ ಬರಲಿಲ್ಲ. ಈಗ ಈ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಎಂದು ಪಾಲಕರು ಅಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net