ಕಾರ್ ಬಾನೆಟ್‌ನೊಳಗೆ 6 ಅಡಿ ಉದ್ದದ ಹೆಬ್ಬಾವು ಪತ್ತೆ!

Untitled design - 2023-10-19T193436.568
Published on

ನವದೆಹಲಿ: ಕಾರಿನ ಬಾನೆಟ್​​ನೊಳಗಿನ ಇಂಜಿನ್ ಸೆಕ್ಷನ್​ನಲ್ಲಿ 6 ಅಡಿ ಉದ್ದದ ಹೆಬ್ಬಾವು ಪತ್ತೆಯಾದ ಘಟನೆ ದಕ್ಷಿಣ ದೆಹಲಿಯಲ್ಲಿ ವರದಿಯಾಗಿದೆ.

ಬೃಹತ್ ಗಾತ್ರದ ಹೆಬ್ಬಾವು ತನ್ನ ಕಾರಿನ ಬಾನೆಟ್​ನೊಳಗೆ ಇರುವುದನ್ನು ಪತ್ತೆ ಹಚ್ಚಿದ ಕಾರು ಮಾಲೀಕ, ಪ್ರಾಣಿಗಳ ರಕ್ಷಣೆಗೆ ಮೀಸಲಾಗಿರುವ ದೆಹಲಿ ಮೂಲದ ಎನ್‌ಜಿಒ, ವೈಲ್ಡ್‌ಲೈಫ್ ಎಸ್‌ಒಎಸ್ ಸಿಬ್ಬಂದಿಯನ್ನು ತಕ್ಷಣವೇ ಸಂಪರ್ಕಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ಎಸ್‌ಒಎಸ್ ತಂಡವು ವಾಹನದಲ್ಲಿ ಜಾಗವನ್ನು ಹುಡುಕಿಕೊಂಡಿದ್ದ ಹೆಬ್ಬಾವನ್ನು ರಕ್ಷಿಸಿದ್ದಾರೆ.

ಹೆಬ್ಬಾವನ್ನು ಪತ್ತೆ ಹಚ್ಚಲು ಕಾರಿನ ಅಡಿಗೆ ಹೋದ ರಕ್ಷಕರು ಹಾವನ್ನು ಹಿಡಿಯಲು ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ನಂತರ ರಾಕ್​ ಪೈಥಾನ್​ ಅನ್ನು ಎಚ್ಚರಿಕೆಯಿಂದ ರಕ್ಷಿಸಿ, ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಹಲವರಿಗೆ ತಿಳಿದಿರುವಂತೆ ಭಾರತೀಯ ರಾಕ್ ಹೆಬ್ಬಾವುಗಳು ವಿಷಕಾರಿಯಲ್ಲ ಮತ್ತು ಇವು ಮನುಷ್ಯರಿಗೆ ಯಾವುದೇ ರೀತಿಯ ಅಪಾಯವನ್ನುಂಟು ಮಾಡುವುದಿಲ್ಲ. ಆದಾಗ್ಯೂ, ಅವುಗಳ ಗಾತ್ರದಿಂದಾಗಿ, ಅವುಗಳನ್ನು ಹೆಚ್ಚಾಗಿ ಅಪಾಯಕಾರಿ ಎಂದು ಗುರುತಿಸಲಾಗುತ್ತದೆ ಮತ್ತು ತಪ್ಪಾಗಿ ಗ್ರಹಿಸಲಾಗುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net