

ತಿರುಪತಿ: ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾರ ಸರ್ವ ದರ್ಶನ ಟಿಕೆಟ್ ಪಡೆಯಲು ನೂಕುನುಗ್ಗಲು ಏರ್ಪಟ್ಟ ಪರಿಣಾಮ ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿ 6 ಭಕ್ತರು ಮೃತಪಟ್ಟಿದ್ದಾರೆ. ಬುಧವಾರ ಸಂಜೆ ಅವಘಡ ನಡೆದಿದ್ದು, 20ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಿರುಪತಿಯ ಶ್ರೀನಿವಾಸಂ, ವಿಷ್ಣು ನಿವಾಸಂ ಮತ್ತು ಸತ್ಯನಾರಾಯಣಪುರದಲ್ಲಿರುವ ಬೈರಾಗಿ ಪೆಟ್ಟದ ರಾಮನಾಯ್ಡು ಸ್ಕೂಲ್ ಬಳಿ ಕಾಲ್ತುಳಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ಮಹಿಳೆಯರು ಸೇರಿ ಆರು ಜನರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ರೂಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜನವರಿ 10 ರಿಂದ 19 ವರೆಗೆ ವಿಶೇಷ ದರ್ಶನಕ್ಕಾಗಿ ಭಕ್ತರಿಗೆ ಟಿಕೆಟ್ ವಿತರಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು 94 ಕೌಂಟರ್ಗಳನ್ನು ತೆರೆಯಲಾಗಿದೆ. ತಿರುಪತಿಯಲ್ಲಿ 5 ಕೌಂಟರ್ಗಳಿದ್ದು, ಬುಧವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಉಚಿತ ದರ್ಶನದ ಟಿಕೆಟ್ ಪಡೆಯಲು ಸರದಿ ಸಾಲಿನಲ್ಲಿ ಕಾಯುತ್ತಿದ್ದರು. ಬೇರೆ ಬೇರೆ ರಾಜ್ಯಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಗುರುವಾರ ಬೆಳಗ್ಗೆ 5 ಗಂಟೆಗೆ ಟಿಕೆಟ್ ವಿತರಣೆ ಆರಂಭವಾಗಬೇಕಿತ್ತು. ಮೊದಲ ದಿನ ಜನವರಿ 10, 11 ಮತ್ತು 12 ನೇ ತಾರೀಖಿನ ದರ್ಶನಕ್ಕಾಗಿ 1 ಲಕ್ಷದ 20 ಸಾವಿರ ಟಿಕೆಟ್ ವಿತರಿಸುವುದಾಗಿ ಟಿಟಿಡಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಸಂಜೆ ವೇಳೆ ಮತ್ತಷ್ಟು ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟಿಕೆಟ್ ಸಿಗುವುದಿಲ್ಲ ಎಂದು ಭಕ್ತರು ಟಿಕೆಟ್ ಪಡೆಯಲು ಏಕಾಏಕಿ ಮುಗಿಬಿದ್ದರು. ಈ ವೇಳೆ ಮಹಿಳೆಯರು, ವೃದ್ಧರು ಕುಸಿದು ಬಿದ್ದಿದ್ದರಿಂದ ಕಾಲ್ತುಳಿತಕ್ಕೆ ಒಳಗಾದರು. ಬಳಿಕ ಪೊಲೀಸರು ಹಾಗೂ ಟಿಟಿಡಿ ಸಿಬ್ಬಂದಿ ಜನರನ್ನು ಚದುರಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
5 ಲಕ್ಷ ರೂ. ಪರಿಹಾರ ಘೋಷಣೆ: ಮೃತ ಭಕ್ತರ ಕುಟುಂಬಕ್ಕೆ ಟಿಟಿಡಿ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಮತ್ತೊಂದೆಡೆ ದುರಂತಕ್ಕೆ ದಿಗ್ಭŠಮೆ ವ್ಯಕ್ತಪಡಿಸಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಕೂಡಲೇ ಸ್ಥಳಕ್ಕೆ ತೆರಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವಘಡ ಹೇಗಾಯ್ತು?