

Mansa Devi Temple : ಹರಿದ್ವಾರದ ಮಾನಸ ದೇವಿ ದೇವಸ್ಥಾನದ ಮೆಟ್ಟಿಲು ಮಾರ್ಗದಲ್ಲಿ ಭಾನುವಾರ (ಜುಲೈ 27) ಭಾರಿ ಜನಸಮೂಹ ಜಮಾಯಿಸಿದ ಪರಿಣಾಮ ಕಾಲ್ತುಳಿತ ಸಂಭವಿಸಿ, ಕನಿಷ್ಠ ಆರು ಮಂದಿ ಸಾವಿಗೀಡಾಗಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ಘಟನೆಯನ್ನು ಗರ್ವಾಲ್ ವಿಭಾಗ ಆಯುಕ್ತ ವಿನಯ್ ಶಂಕರ್ ಪಾಂಡೆ ಅವರು ದೃಢಪಡಿಸಿದ್ದಾರೆ. ಹರಿದ್ವಾರದ ಮಾನಸಾ ದೇವಿ ದೇವಸ್ಥಾನದಲ್ಲಿ ಭಾರಿ ಜನಸಮೂಹ ಜಮಾಯಿಸಿದ ಬಳಿಕ ಉಂಟಾದ ಕಾಲ್ತುಳಿತದಲ್ಲಿ ಆರು ಜನರು ಸಾವಿಗೀಡಾಗಿದ್ದಾರೆ. ಸದ್ಯ ನಾನು ಸ್ಥಳಕ್ಕೆ ಹೋಗುತ್ತಿದ್ದೇನೆ. ಈ ಘಟನೆಯ ವಿವರವಾದ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಭಕ್ತರ ಸಮೂಹದ ಮಧ್ಯೆ ಈ ಘಟನೆ ನಡೆದಿರುವ ಪರಿಣಾಮ ಸ್ಥಳದಲ್ಲಿ ಭಾರಿ ಗೊಂದಲ ಮತ್ತು ಭೀತಿ ಉಂಟಾಗಿದೆ. ಕಾಲ್ತುಳಿತದ ಬಗ್ಗೆ ಮಾಹಿತಿ ಬಂದ ತಕ್ಷಣ, ಸ್ಥಳೀಯ ಪೊಲೀಸರು ಮತ್ತು ಆಡಳಿತ ತಂಡಗಳು ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಸದ್ಯಕ್ಕೆ ನಡೆಯುತ್ತಿವೆ. ಇದರ ನಡುವೆ ಅಧಿಕಾರಿಗಳು ಮೃತರನ್ನು ಗುರುತಿಸುವ ಮತ್ತು ಈ ಘಟನೆಗೆ ಕಾರಣವಾದ ನಿಖರ ಅಂಶವನ್ನು ನಿರ್ಣಯಿಸುವ ಪ್ರಕ್ರಿಯೆಯಲ್ಲಿದ್ದಾರೆ.
ಈ ಘಟನೆ ಸಂಬಂಧ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹರಿದ್ವಾರದ ಮಾನಸಾ ದೇವಿ ದೇವಾಲಯದಲ್ಲಿ ಉಂಟಾದ ಕಾಲ್ತುಳಿತದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಎಸ್ಡಿಆರ್ಎಫ್, ಸ್ಥಳೀಯ ಪೊಲೀಸರು ಮತ್ತು ಇತರ ರಕ್ಷಣಾ ತಂಡಗಳು ಸ್ಥಳದಲ್ಲಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಪೋಸ್ಟ್ ಮಾಡಿದ್ದಾರೆ.
ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಎಲ್ಲಾ ಭಕ್ತರ ಯೋಗಕ್ಷೇಮಕ್ಕಾಗಿ ನಾನು ಮಾತಾ ರಾಣಿಯನ್ನು ಪ್ರಾರ್ಥಿಸುತ್ತೇನೆ ಎಂದು ಪುಷ್ಕರ್ ಧಾಮಿ ಹೇಳಿದ್ದಾರೆ. (ಏಜೆನ್ಸೀಸ್)