

ಬೆಂಗಳೂರು: ಮೈಸೂರು ರಸ್ತೆಯಲ್ಲಿರುವ ‘ನಗರ ಸಶಸ ಮೀಸಲು ಪಡೆ’ (ಸಿಎಆರ್) ಕೇಂದ್ರ ಘಟಕ ಕಚೇರಿಯ ಬ್ಯಾಂಕ್ ಖಾತೆಯಲ್ಲಿ 59.80 ಲಕ್ಷ ರೂ. ಗುಳುಂ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಸಿಎಆರ್ ಸಹಾಯಕ ಆಡಳಿತಾಧಿಕಾರಿ (ಎಎಒ) ರಾಜಲಕ್ಷ್ಮೀ, ಸಿಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ನಿವೃತ್ತ ಎಎಒ ಬಿ. ಸರೋಜಾ ಮತ್ತು ಹಿಂದಿನ ಎಸ್‌ಡಿಎ ಡಿ.ಎಸ್. ಪ್ರಶಾಂತ್ ಎಂಬುವರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಆರ್ ಕೇಂದ್ರ ಘಟಕ ಕಚೇರಿಯಲ್ಲಿ ಜ. 2ರಿಂದ 20ರ ನಡುವೆ ಮಹಾಲೇಖಪಾಲರ ಲೆಕ್ಕ ಪರಿಶೀಲನೆ ನಡೆಯಿತು. ಇದರಲ್ಲಿ ಲೆಂಟ್ ಗಾರ್ಡ್ ಚಾರ್ಜಸ್ ಮೊತ್ತದಲ್ಲಿ 59.80 ಲಕ್ಷ ರೂ. ಕೊರತೆ ಇರುವುದು ಕಂಡುಬಂತು. ಡಿಸಿಪಿ ಸಿಎಆರ್ ಕೇಂದ್ರ ಹೆಸರಿನ ಕೆನರಾ ಬ್ಯಾಂಕ್ ಖಾತೆಯಲ್ಲಿ ಕೆಲ ಅನಧಿಕೃತ ವಹಿವಾಟು ನಡೆದಿರುವ ಬಗ್ಗೆಯೂ ವರದಿಯಾಗಿದೆ.
2012ರಿಂದ 2021ರ ಜೂನ್‌ವರೆಗೂ ಪ್ರಶಾಂತ್, ನಗದು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2015ರ ಅ. 25ರಿಂದ 2024ರ ಮೇ 31ರ ವರೆಗೆ ಸರೋಜಾ ಬಿ. ಬಿಜಾಪುರ್ ಎಎಒ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಲೆಂಟ್ ಗಾರ್ಡ್ ಚಾರ್ಜಸ್ ವಿಭಾಗದ ಬ್ಯಾಂಕ್ ಖಾತೆಯಿಂದ ವಸತಿಗೃಹಗಳ ನೀರಿನ ಬಿಲ್, ವೇತನ ರಿಕವರಿ ಮೊತ್ತ ಮತ್ತು ಇತರೆ ಹಣಕಾಸು ನಿರ್ವಹಣೆಗಾಗಿ ಬಳಸಲಾಗುತ್ತಿದೆ. ಪ್ರಶಾಂತ್, ಸಿದ್ಧಪಡಿಸಿದ ಲೆಕ್ಕಪತ್ರಗಳಿಗೆ ಸರೋಜಾ ಪರಿಶೀಲನೆ ನಡೆಸದೆ ಸಹಿ ಮಾಡುತ್ತಿದ್ದರು.
ಅಲ್ಲದೆ, ಪ್ರಶಾಂತ್ ಬೇರೆಡೆ ವರ್ಗಾವಣೆ ಆಗುವಾಗ ಕಡತಗಳ ಪ್ರಭಾರವನ್ನು ನೀಡದೆ ಇದ್ದರೂ ಸರೋಜಾ ಆತನ, ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಂಡಿಲ್ಲ. ಈ ಇಬ್ಬರು ಸೇರಿ ಅನಧಿಕೃತವಾಗಿ ಖಾಸಗಿಯವರಿಗೆ ಮತ್ತು ಅನ್ಯ ವಹಿವಾಟಿಗೆ ಹಣ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಆದರಿಂದ ಪ್ರಶಾಂತ್ ಮತ್ತು ಸರೋಜಾ ಪೊಲೀಸ್ ಇಲಾಖೆಗೆ ವಂಚನೆ ಮತ್ತು ನಂಬಿಕೆ ದ್ರೋಹ ಮಾಡಿ ಸರ್ಕಾರದ ಹಣವನ್ನು ದುರ್ಬಳಕ್ಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ರಾಜಲಕ್ಷ್ಮೀ ಆರೋಪಿಸಿದ್ದಾರೆ. ಈ ಮೇರೆಗೆ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ಮಾಃಇತಿ ನೀಡಿದ್ದಾರೆ.