

ಪಟನಾ: ಬಿಹಾರ ವಿಧಾನಸಭೆಯ 71 ಕ್ಷೇತ್ರಗಳಿಗೆ ಬುಧವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ. 53.54 ಮತದಾನವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಗರಿಷ್ಠ ಮಟ್ಟದಲ್ಲಿ ತೆಗೆದುಕೊಳ್ಳಲಾಗಿತ್ತು. ಬೆಳಗ್ಗೆ 7ಕ್ಕೆ ಆರಂಭವಾದ ಮತದಾನ, ಸಂಜೆ 6ಕ್ಕೆ ಕೊನೆಗೊಂಡಿತು. 2.15 ಕೋಟಿ ಜನರು ಮತದಾನಕ್ಕೆ ಅರ್ಹರಾಗಿದ್ದರು. 1,066 ಅಭ್ಯರ್ಥಿಗಳ ಕಣದಲ್ಲಿದ್ದರು. ನ. 3 ಮತ್ತು 7ಕ್ಕೆ ಇನ್ನೆರಡು ಹಂತದ ಚುನಾವಣೆ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
2015ರಲ್ಲಿ ಮೊದಲ ಹಂತದ ಚುನಾವಣೆಯಲ್ಲಿ್ಲ ಶೇ.54.94 ಮತದಾನ ನಡೆದಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಶೇ. 53.54 ಮತದಾರರು ಹಕ್ಕು ಚಲಾಯಿಸಿದ್ದರು ಎಂದು ಚುನಾವಣಾ ಆಯೋಗ ಹೇಳಿದೆ.
ಕಣದಲ್ಲಿದ್ದ ಪ್ರಮುಖರು: ಮೊದಲ ಹಂತದ ಚುನಾವಣೆಯಲ್ಲಿ ಜಿತಿನ್ ರಾಂ ಮಾಂಝಿ, ಕ್ರೀಡಾಪಟು ಶ್ರೇಯಸಿ ಸಿಂಗ್, ಮುಖಂಡರಾದ ಪ್ರೇಮ್ ಕುಮಾರ್, ಜೈ ಕುಮಾರ್ ಸಿಂಗ್, ಅನಂತ ಕುಮಾರ್ ಸಿಂಗ್ ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಕ್ಷೇತ್ರಗಳ ಪೈಕಿ ಇಮಾಮ್ಂಜ್, ಸಸಾರಾಮ್ ದಿಂಗ್ರಾ, ಗಯಾ, ಮುಂಗರ್, ಜಮುಯಿ, ಮೊಕಾಮಾ, ಜಮಾಲ್ಪುರ್, ಚೈನಿಪುರ್, ಬಕ್ಸರ್ ಮಹತ್ವದ್ದಾಗಿವೆ.
ಪ್ರತಿಯೊಂದು ಮತವೂ ಬಿಹಾರವನ್ನು ‘ಬಿಮಾರ್’ (ರೋಗಗ್ರಸ್ತ) ಆಗುವುದನ್ನು ತಡೆಯುತ್ತದೆ. ಜಂಗಲ್ ರಾಜ್ನ ಯುವರಾಜನ (ತೇಜಸ್ವಿ ಯಾದವ್) ಬಗ್ಗೆ ಮತ್ತು ಅಪಹರಣದ ಹಕ್ಕುಸ್ವಾಮ್ಯ ಹೊಂದಿದ ಪಕ್ಷ (ಆರ್ಜೆಡಿ) ಕುರಿತು ಎಚ್ಚರಿಕೆ ವಹಿಸಿ ಸರಿಯಾದ ಪಕ್ಷ ಮತ್ತು ಅಭ್ಯರ್ಥಿಗೆ ಮತ ನೀಡಿ.
| ನರೇಂದ್ರ ಮೋದಿ ಪ್ರಧಾನಿ
ಬಿಹಾರದ ಮಿಥಿಲಾಂಚಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಎರಡನೇ ಹಂತದ ಪ್ರಚಾರ ಕಾರ್ಯ ಕೈಗೊಂಡರು. ಸೀತಾ ಮಾತೆಯ ತವರಿನಲ್ಲಿ ರಾಮನಾಮ ಜಪಿಸುವ ಮೂಲಕ ಮತದಾರರ ಗಮನ ಸೆಳೆದರು. ಜೆಡಿಯು ಅಧ್ಯಕ್ಷ ಮತ್ತು ಸಿಎಂ ನಿತೀಶ್ ಕುಮಾರ್ ಜತೆಗೆ ದರ್ಭಾಂಗದಲ್ಲಿ ಜಂಟಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಶತಮಾನದ ನಂತರ ಅಯೋಧ್ಯೆಯ ರಾಮ ಮಂದಿರದ ಕನಸು ನನಸಾಗುತ್ತಿದೆ. ಟೀಕಾಕಾರರು ಮಂದಿರ ನಿರ್ವಣದ ದಿನಾಂಕ ಯಾವುದೆಂದು ಕೇಳುತ್ತಿದ್ದರು. ಅವರಿಗೆ ಉತ್ತರ ಸಿಕ್ಕಿದೆ. ಇದು ಬಿಜೆಪಿ ಮತ್ತು ಎನ್ಡಿಎ ಹೆಗ್ಗುರುತು. ನಾವು ಏನು ಹೇಳುತ್ತೇವೆಯೂ ಅದನ್ನೇ ಮಾಡುತ್ತೇವೆ ಎಂದರು. ಕಾಂಗ್ರೆಸ್, ಆರ್ಜೆಡಿ ಜತೆಗೂಡಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ 2015ರಲ್ಲಿ, ‘ಅಯೋಧ್ಯೆಯಲ್ಲಿ ರಾಮ ಮಂದಿರದ ಬಗ್ಗೆ ಬೊಬ್ಬೆಹಾಕುವ ಬಿಜೆಪಿ ಮತ್ತು ಆರ್ಎಸ್ಎಸ್ ಮಂದಿರ ನಿರ್ವಣದ ದಿನಾಂಕ ಏಕೆ ನೀಡುತ್ತಿಲ್ಲ?’ ಎಂದು ಪ್ರಶ್ನಿಸಿದ್ದರು. ಈಗ ಅವರಿಗೆ ಖುದ್ದಾಗಿ ಮೋದಿ ಪರೋಕ್ಷ ಗುದ್ದು ನೀಡಿದರು. ಅಯೋಧ್ಯೆ ಬಗ್ಗೆ ಮಾತನಾಡುವುದಕ್ಕೂ ಮುನ್ನ ಕಳೆದ 15 ವರ್ಷಗಳಿಂದ ಬಿಹಾರದಲ್ಲಿನ ಪ್ರಗತಿಗೆ ನಿತೀಶ್ ಕಾರಣರೆಂದು ಮುಕ್ತವಾಗಿ ಶ್ಲಾಘಿಸಿದರು. ಮುಂದಿನ ಮುಖ್ಯಮಂತ್ರಿಯೂ ಅವರೇ ಎಂದು ಹೇಳಿದರು.