ಪ್ರೊಫೆಸರ್ ಮೇಲೆ ಲೈಂಗಿಕ ಕಿರುಕುಳ ಆರೋಪ; ಪ್ರಧಾನಿಗೆ ಪತ್ರ ಬರೆದ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹೇಳಿದ್ದಿಷ್ಟು!

ವಿಜಯವಾಣಿ - 2024-01-09T082125.685
Published on

ಚಂಡೀಗಢ: ಚೌಧರಿ ದೇವಿ ಲಾಲ್ ವಿಶ್ವವಿದ್ಯಾಲಯದ ಸುಮಾರು 500ಕ್ಕೂ ಹೆಚ್ಚು ಮಹಿಳಾ ವಿದ್ಯಾರ್ಥಿಗಳು ಕಾಲೇಜಿನ ಪ್ರಾಧ್ಯಾಪಕರೊಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ ಎಸಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಪತ್ರ ರವಾನಿಸುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಘಟನೆ ಹರಿಯಾಣದ ಸಿರ್ಸಾದಲ್ಲಿ ವರದಿಯಾಗಿದೆ.

ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದು, ಅವರನ್ನು ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸಿ, ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದು, ಪತ್ರದ ಪ್ರತಿಗಳನ್ನು ಉಪಕುಲಪತಿ ಅಜ್ಮೀರ್ ಸಿಂಗ್ ಮಲಿಕ್, ರಾಜ್ಯಪಾಲ ಬಂಡಾರು ದತ್ತಾತ್ರೇಯ, ರಾಜ್ಯ ಗೃಹ ಸಚಿವ ಅನಿಲ್ ವಿಜ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಇತರರಿಗೆ ಕಳುಹಿಸಿ, ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ದಾರೆ.

ಪತ್ರದಲ್ಲಿ ಪ್ರೊಫೆಸರ್ ವಿರುದ್ಧ ಆರೋಪಿಸಿರುವ ವಿದ್ಯಾರ್ಥಿನಿಯರು, "ಕೊಳಕು ಮತ್ತು ಅಶ್ಲೀಲ ಕೃತ್ಯಗಳನ್ನು ಎಸಗುತ್ತಿದ್ದ ಪ್ರೊಫೆಸರ್, ಯುವತಿಯರ ಖಾಸಗಿ ಭಾಗಗಳನ್ನು ಸ್ಪರ್ಶಿಸುತ್ತಿದ್ದ. ತನ್ನ ಕಚೇರಿಗೆ ಕರೆದು, ಬಾತ್ ರೂಂಗೆ ಕರೆದೊಯ್ದು, ಖಾಸಗಿ ಭಾಗಗಳನ್ನು ಮುಟ್ಟುತ್ತಾರೆ ಮತ್ತು ನಮ್ಮೊಂದಿಗೆ ಅಶ್ಲೀಲ ವಿಷಯಗಳನ್ನು ಮಾತಾಡುತ್ತಾರೆ" ಎಂದು ಉಲ್ಲೇಖಿಸಿದ್ದಾರೆ.

ಈ ಘಟನೆ ಕುರಿತು ಮಾಡಿದ ಪ್ರತಿಭಟನೆಗೆ ನೀವು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕೂಡ ಹಾಕಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net