More

    ರೈತರನ್ನು ಮತ್ತೆ ಕಾಡಿದ ಕಾಡಾ ನಿರ್ಧಾರ! – ದಾವಣಗೆರೆ ಜಿಲ್ಲೆಯಲ್ಲಿ ಅಸಮಾಧಾನದ ಹೊಗೆ -74 ದಿನ ಭದ್ರಾ ನೀರು ಹರಿಸಲು ಒತ್ತಡ 

    ದಾವಣಗೆರೆ: ಆನ್ ಆ್ಯಂಡ್ ಆಫ್ ಮಾದರಿಯಲ್ಲಿ ಭದ್ರಾ ನೀರು ಹರಿಸುವ ಸಂಬಂಧ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶನಿವಾರ ಕೈಗೊಂಡ ನಿರ್ಧಾರ, ದಾವಣಗೆರೆ ಜಿಲ್ಲೆಯ ರೈತರ ಅಸಮಾಧಾನಕ್ಕೆ ಎಡೆ ಮಾಡಿದೆ.
    ಜಿಲ್ಲೆಯ ವ್ಯಾಪ್ತಿಗೆ (ಭದ್ರಾವತಿ ಸೇರಿ) ಬರುವ ಭದ್ರಾ ಬಲದಂಡೆ ನಾಲೆಗೆ ಜ.20ರಿಂದ 12 ದಿನ ನೀರು ಹರಿಸಿ ನಂತರ 15 ದಿನ ಸ್ಥಗಿತಗೊಳಿಸಲು ಹಾಗೂ ನಂತರದ ಮೂರು ಹಂತದಲ್ಲಿ 12, 14 ಹಾಗೂ 15 ದಿನದ ಅವಧಿಗಳಿಗೆ ನೀರು ಹಾಯಿಸಲು ಕಾಡಾ ಸಮಿತಿ ನಿರ್ಧರಿಸಿದೆ. 12 ದಿನ ನೀರು ಹಾಯಿಸಿದರೆ ದಾವಣಗೆರೆ ಭಾಗದ ಜಮೀನುಗಳಿಗೆ ತಲುಪುವುದಿಲ್ಲ ಎಂಬುದು ರೈತರ ಆತಂಕ.
    ಶಿವಮೊಗ್ಗ ಜಿಲ್ಲೆಯ ಎಡದಂಡೆ ನಾಲೆಗಳಿಗೆ ಜ.10ರಿಂದ ನಾಲ್ಕು ಹಂತದಲ್ಲಿ 16ರಿಂದ 20 ದಿನಗಳವರೆಗೆ ನೀರು ಹರಿಸುವ ಪ್ರತ್ಯೇಕ ವೇಳಾಪಟ್ಟಿ ಪ್ರಕಟಿಸಿರುವುದು ಕೂಡ ಕೆಂಗಣ್ಣಿಗೆ ಗುರಿಯಾಗಿದೆ. ಈ ನಿರ್ಧಾರ ಜಲಾಶಯದ ಇತಿಹಾಸದಲ್ಲೇ ಮೊದಲನೆಯದು ಎಂಬ ಆರೋಪವಿದೆ.
    ಸದ್ಯಕ್ಕೆ ಜಲಾಶಯದಲ್ಲಿ ಬಳಕೆಗೆ ಬಾರದ ಡೆಡ್ ಸ್ಟೋರೇಜ್ ಕೈಬಿಟ್ಟು 21.54 ಟಿಎಂಸಿ ನೀರು ಬಳಕೆಗೆ ಸಿಗಲಿದೆ. ಇದನ್ನು ಎಡ ಹಾಗೂ ಬಲದಂಡೆಗಳಿಗೆ ನಿತ್ಯ 0.29 ಟಿಎಂಸಿಯಂತೆ 74 ದಿನಗಳ ಕಾಲ ಹರಿಸಲು ಅವಕಾಶ ಇದೆ. ಕುಡಿವ ನೀರಿಗಾಗಿ ಪ್ರತ್ಯೇಕವಾಗಿ ನೀರು ಮೀಸಲಿಡಬೇಕಿಲ್ಲ ಎಂಬುದು ರೈತರ ವಾದ. 1.91 ಟಿಎಂಸಿ ನೀರು ಆವಿಯಾಗುತ್ತದೆಂಬ ಅಧಿಕಾರಿಗಳ ಲೆಕ್ಕಾಚಾರದಲ್ಲಿ ಹುರುಳಿಲ್ಲ ಎಂದೂ ಹೇಳಲಾಗುತ್ತಿದೆ. 53 ದಿನದ ಬದಲಿಗೆ 74 ದಿನಗಳ ಕಾಲ ನೀರು ಹರಿಸುವ ಒತ್ತಡ ಹೇರುವ ಭಾಗವಾಗಿ ರೈತರು ಹರತಾಳಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ರೈತರು, ಮುಖಂಡರು ಅನಿಸಿಕೆ ಹಂಚಿಕೊಂಡಿದ್ದಾರೆ.

    ಅಕ್ರಮಕ್ಕೆ ಅವಕಾಶ ನೀಡದಿರಿ
    ನಾಲ್ಕು ಹಂತದಲ್ಲಿ ನಾಲೆಗೆ ನೀರು ಹರಿಸುವ ನಿರ್ಧಾರರಿಂದ ಸಂತಸ-ನೋವು ಎರಡೂ ಆಗಿದೆ. ಚನ್ನಗಿರಿ ತಾಲೂಕಿನಲ್ಲಿ ಅಡಕೆ, ಭತ್ತ ಎರಡನ್ನೂ ಬೆಳೆಯುವ ರೈತರಿದ್ದಾರೆ. ತಾಲೂಕಿನ ಕೊಳವೆಬಾವಿಗಳಲ್ಲಿ ಈಗಲೇ ಸಮರ್ಪಕ ನೀರು ದಕ್ಕದೆ ಬಾಡಿಗೆ ರೂಪದಲ್ಲಿ ಪಡೆಯಬೇಕಿದೆ. ನಾಲೆಯಲ್ಲಿ ನೀರು ಹರಿಸುವ ನಿಗದಿತ ದಿನಗಳನ್ನು ವಿಸ್ತರಿಸಬೇಕು. ಇಲ್ಲವಾದಲ್ಲಿ ಕೊನೆ ಭಾಗದ ರೈತರಿಗೆ ಕಷ್ಟವಾಗಬಹುದು. ಅಕ್ರಮವಾಗಿ ನೀರು ಪಡೆಯುವ ಸ್ಥಿತಿ ಬರಬಹುದು. ಇದಕ್ಕೆ ಅವಕಾಶವಾಗದಂತೆ ಕಾಡಾ ಸಮಿತಿ ಎಚ್ಚರವಹಿಸಲಿ.
    ಕಲೀಂ ಉಲ್ಲಾ ಕರೇಕಟ್ಟೆ,
    ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ, ಚನ್ನಗಿರಿ.
    ……….
    ಕಡೇ ಭಾಗದ ರೈತರಿಗೆ ತೊಂದರೆ
    ಹನ್ನೆರಡು ದಿನಕ್ಕೆ ಸೀಮಿತವಾಗಿ ನೀರು ಕೊಟ್ಟರೆ ಕೊನೆಯ ಭಾಗದ ರೈತರಿಗೆ ನೀರು ಸಿಗುವುದಿಲ್ಲ. ಬೇಸಿಗೆ ಹಂಗಾಮಿನ ತೆಂಗು ಮತ್ತು ಅಡಕೆ ಬೆಳೆಗೆ ಎರಡು ವಾರದ ನೀರು ಸಾಕಾಗುವುದಿಲ್ಲ. ಕನಿಷ್ಠ 15 ದಿನಗಳಾದರೂ ನಾಲೆಗಳಿಗೆ ನೀರು ಹರಿಸಬೇಕಿತ್ತು. ಭದ್ರಾ ಕಾಡಾ ಸಮಿತಿ ತೀರ್ಮಾನದಿಂದ ರೈತರಿಗೆ ಅನಾನುಕೂಲವಾಗಿದೆ. ಅಕ್ರಮ ಪಂಪ್‌ಸೆಟ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿದರೆ ಕೊನೆ ಭಾಗಕ್ಕೆ ಸ್ವಲ್ಪಮಟ್ಟಿಗೆ ನೀರು ಸಿಗಬಹುದು.
    ಬೆಣ್ಣೆಹಳ್ಳಿ ಸಿದ್ದೇಶ್, ಅಡಕೆ ಬೆಳೆಗಾರ, ಮಲೇಬೆನ್ನೂರು.
    ………….
    ಜನ-ಜಾನುವಾರುಗಳನ್ನೂ ಬದುಕಿಸಿ
    ಕಳೆದ ಎರಡು ವರ್ಷಗಳಿಂದ ತೀವ್ರ ಬರ ಬಂದಿದೆ. ಭದ್ರಾ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಬೆಳೆ ಬೆಳೆಯಲಾಗಿದೆ. ಎರಡನೇ ಬೆಳೆಗೂ ನೀರು ನೀಡಿದರೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಲಿದೆ. ಜೀವ ಇದ್ದರೆ ನಂತರ ಜೀವನ. ಆದ್ದರಿಂದ ಮೊದಲು ಜನ-ಜಾನುವಾರುಗಳಿಗೆ ಕುಡಿಯುವ ನೀರು ಕೊಡಿ, ನಂತರ ಬೆಳೆಗಳಿಗೆ ನೀರು ಕೊಡಲಿ.
    ಯಶೋದಮ್ಮ, ಪ್ರಗತಿಪರ ರೈತ ಮಹಿಳೆ, ಯರಗನಾಳು ಗ್ರಾಮ.
    …………..
    ತೋಟಗಾರಿಕೆ ಬೆಳೆಗಳಿಗೂ ಕಂಟಕ
    ಭದ್ರಾ ಕಾಡಾ ಸಮಿತಿಯ ತೀರ್ಮಾನ ಸೂಕ್ತವಾದುದಲ್ಲ. 12 ದಿನಗಳ ಬದಲಾಗಿ ಸತತ 20 ದಿನಗಳವಧಿಗೆ ನೀರು ನೀಡಿದರೆ ಕೊನೆಯ ಭಾಗದ ರೈತರಿಗೆ ನೀರು ತಲುಪಲಿದೆ. ನೀರು ಬಿಟ್ಟ ದಿನದಿಂದ ಕೊನೆ ಭಾಗಕ್ಕೆ ಬರಲು ಒಂದು ವಾರ ಬೇಕು. ಅದರಲ್ಲೂ ಆನ್ ಆ್ಯಂಡ್ ಆಫ್ ಪದ್ಧ್ದತಿ ಇರುವುದರಿಂದ ನೀರು ಸಿಗುವುದು ಕಷ್ಟ. ಇದರಿಂದ ತೋಟಗಾರಿಕೆ ಬೆಳೆಗಳು ನಾಶವಾಗುವುದು ನಿಶ್ಚಿತ. ಜಿಲ್ಲೆಯ ಯಾವ ಜನಪ್ರತಿನಿಧಿಗಳೂ ಕೊನೆಯ ಭಾಗದ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.
    ಕೆ.ಎಚ್. ನಾಗನಗೌಡ,
    ಪ್ರಗತಿಪರ ರೈತ, ಕಡರನಾಯಕನಹಳ್ಳಿ.
    —-
    ಎಡವಿದ ಐಸಿಸಿ ಅಧಿಕಾರಿಗಳು
    ಮಳೆಗಾಲದಲ್ಲಿ ಹೆಚ್ಚಿನ ನೀರು ಹರಿಸಿರುವ ಕಾಡಾ ಸಮಿತಿ ಅಧಿಕಾರಿಗಳು ಡ್ಯಾಂ ನೀರಿನ ಬಳಕೆಯಲ್ಲಿ ಎಡವಿರುವುದು ಸ್ಪಷ್ಟವಾಗಿದೆ. ಇನ್ನೊಂದೆಡೆ ತೋಟಗಾರಿಕೆ ಬೆಳೆಗಾರರು ಕೂಡ ಸರ್ಕಾರಕ್ಕೆ ಪೂರ್ವದಲ್ಲೇ ಒತ್ತಡ ತಂದಿದ್ದರೆ ಎರಡೂ ಭಾಗಕ್ಕೂ ಸೂಕ್ತ ತೀರ್ಮಾನ ಕೊಡಬಹುದಿತ್ತು. ಬೇಸಿಗೆಯಲ್ಲಿ ಭದ್ರಾ ಮೇಲ್ದಂಡೆಗೆ ನೀರು ಕೊಡಬಾರದು ಎಂದಿದ್ದರೂ 1.09 ಟಿಎಂಸಿ ನೀರು ಹರಿಸುತ್ತಿರುವುದು ಕೂಡ ರೈತರನ್ನು ಬಾಧಿಸಲಿದೆ. ನೀರು ಹರಿಸುವಾಗ ರಾಮನ ಲೆಕ್ಕ, ನಿಲ್ಲಿಸಬೇಕೆಂಬ ವಿಚಾರ ಬಂದಾಗ ಕೃಷ್ಣನ ಲೆಕ್ಕ ಮಾಡಲಾಗುತ್ತಿದೆ. ಜಲಾಯಶದಲ್ಲಿ 4.5 ಟಿಎಂಸಿ ಪ್ರಮಾಣದಷ್ಟು ಹೂಳಿದೆ ಎಂಬ ಅಧಿಕಾರಿಗಳ ಲೆಕ್ಕಾಚಾರವನ್ನು ನಂಬುವುದು ಕಷ್ಟವಾಗಿದೆ.
    ತೇಜಸ್ವಿ ಪಟೇಲ್
    ರೈತ ಮುಖಂಡರು.

    ನಿರ್ವಹಣೆಯತ್ತ ಜಿಲ್ಲಾಡಳಿತ ಗಮನವಿಡಲಿ
    ಭದ್ರಾ ಡ್ಯಾಂ ನೀರಿನ ಲೆಕ್ಕಾಚಾರ ವಿಚಾರದಲ್ಲಿ ಕಾಡಾ ಸಮಿತಿ ಅಧಿಕಾರಿಗಳು ರೈತರಿಗೆ ಸುಳ್ಳು ಹೇಳಿ ಮೋಸ ಮಾಡಿದರೆ ಸಹಿಸುವುದಿಲ್ಲ. ಅಕ್ರಮ ಪಂಪ್‌ಸೆಟ್‌ದಾರರು ನೀರನ್ನು ಎತ್ತುವಳಿ ಮಾಡಿಕೊಂಡರೆ ದಾವಣಗೆರೆ ಭಾಗಕ್ಕೆ ಸ್ವಲ್ಪ ತಡವಾಗಿ ಬರಲಿದೆ. ಹೀಗಾಗಿ ಜಿಲ್ಲಾಡಳಿತ, ನೀರಾವರಿ ಇಲಾಖೆ ನೀರಿನ ನಿರ್ವಹಣೆಯಲ್ಲಿ ಎಚ್ಚರ ವಹಿಸಬೇಕು. ಐಸಿಸಿ ಸಮಿತಿ ಇನ್ನೂ ಹೆಚ್ಚಿನ ದಿನಗಳಿಗೆ ನೀರು ಹರಿಸಬೇಕು. ಜಿಲ್ಲೆಯ ರೈತರು ಒಟ್ಟಾಗಿ ಪ್ರತಿಭಟನೆ ನಡೆಸಿದಲ್ಲಿ ಬೆಂಬಲ ನೀಡಲಾಗುವುದು.
    ಹೊನ್ನೂರು ಮುನಿಯಪ್ಪ, ರೈತ ಮುಖಂಡರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts