

ಕೊಚ್ಚಿ: ಅರಬ್ಬಿ ಸಮುದ್ರದಲ್ಲಿ ಡ್ರಗ್ಸ್ ಪತ್ತೆಗೆ ಬಿರುಸಿನ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆ, ಕಡೆಗೂ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ನೌಕಾಪಡೆಯು ಶ್ರೀಲಂಕಾ ಧ್ವಜಗಳನ್ನು ಹೊಂದಿರುವ ಎರಡು ದೋಣಿಗಳಲ್ಲಿ ಡ್ರಗ್ಸ್ ಇರುವುದನ್ನು ಪತ್ತೆಹಚ್ಚಿದ್ದು, 500 ಕೆಜಿ ಸ್ಫಟಿಕ ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಂಡಿದೆ.
ಈ ತಿಂಗಳ 24 ಮತ್ತು 25ರಂದು ಅರಬ್ಬಿ ಸಮುದ್ರದಲ್ಲಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ನೌಕಾಪಡೆ ಮಾಹಿತಿ ಹಂಚಿಕೊಂಡಿದೆ. ಶ್ರೀಲಂಕಾ ನೌಕಾಪಡೆಯು ಮಾದಕವಸ್ತು ಕಳ್ಳಸಾಗಣೆ ಕುರಿತು ನೀಡಿದ ಮಾಹಿತಿಯ ಆಧಾರದ ಮೇರೆಗೆ ಭಾರತೀಯ ನೌಕಾಪಡೆಯ ಲಾಂಗ್ ರೇಂಜ್ ಮ್ಯಾರಿಟೈಮ್ ಪೆಟ್ರೋಲ್ ಏರ್‌ಕ್ರಾಫ್ಟ್ ಮತ್ತು ರಿಮೋಟ್‌ಲಿ ಪೈಲಟೆಡ್ ಏರ್‌ಕ್ರಾಫ್ಟ್‌ಗಳನ್ನು ಬಳಸಿ, ಎರಡು ಮೀನುಗಾರಿಕಾ ಬೋಟ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು ಎಂದು ತಿಳಿಸಿದೆ.
ನಂತರ ಭಾರತೀಯ ನೌಕಾಪಡೆಯು ಯುದ್ಧನೌಕೆಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿ, ಮಾದಕವಸ್ತುವನ್ನು ಸಾಗಿಸುತ್ತಿದ್ದ ದೋಣಿಗಳ ಮೇಲೆ ವಿಶೇಷ ತರಬೇತಿ ಪಡೆದ ನೌಕಾಪಡೆಯ ಸಿಬ್ಬಂದಿಯನ್ನು ಬಿಟ್ಟು, 500 ಕೆಜಿ ಡ್ರಗ್ಸ್ ಕಳ್ಳಸಾಗಣೆದಾರರನ್ನು ಹತ್ತಿಕ್ಕಿದೆ. ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಭಾರತ ಮತ್ತು ಶ್ರೀಲಾಂಕಾ ನೌಕಪಡೆ, ಕಡಲ ಪ್ರದೇಶಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಂಯೋಜಿತ ಸಂಕಲ್ಪವನ್ನು ಎತ್ತಿ ತೋರಿಸಿದೆ,(ಏಜೆನ್ಸೀಸ್).