

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಭಿನಯ, ವ್ಯಕ್ತಿತ್ವದಿಂದ ಜನರ ಮನ ಗೆದ್ದಿರುವ ಹಿರಿಯ ನಟ ಅನಂತನಾಗ್. ಅವರು ಚಿತ್ರರಂಗದಲ್ಲಿ ಸುದೀರ್ಘ 50 ವರ್ಷ ಪೂರೈಸಿರುವ ಸಂಭ್ರಮ ಆಚರಿಸಲು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಸುಧೀಂದ್ರ ವೆಂಕಟೇಶ್, ವಾಸು ಹಾಗೂ ಸುನೀಲ್ ‘ಸುವರ್ಣ ಅನಂತ’ ಕಾರ್ಯಕ್ರಮ ಆಯೋಜಿಸಿ, ಅನಂತನಾಗ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್, ಅನಂತನಾಗ್ ಜತೆ ಸಂವಾದ ನಡೆಸಿದರು.
ಸದಾ ಮೆಲುಕು ಹಾಕುವ ವಿಷಯ: 50 ವರ್ಷದ ಸುದೀರ್ಘ ಸಿನಿಪಯಣದಲ್ಲಿ ವಿವಿಧ ಪಾತ್ರಗಳಿಗೆ ಜೀವ ನೀಡಿರುವ ಅನಂತನಾಗ್ ನಿಜವಾದ ಖುಷಿ ಕಂಡುಕೊಂಡಿದ್ದು ರಂಗಭೂಮಿಯಲ್ಲಂತೆ. ಆ ದಿನಗಳನ್ನು ಮೆಲುಕು ಹಾಕುವ ಅವರು, ‘ನನ್ನ ಬಾಲ್ಯದ ದಿನಗಳು ಆಧ್ಯಾತ್ಮಿಕ ವಾತಾವರಣದಲ್ಲಿತ್ತು. ಅಲ್ಲೆಲ್ಲ, ಸಂಗೀತ, ಹಾಮೋನಿಯಮ್ ತಬಲಾ ಕಲಿತೆ. ನಂತರ ಮುಂಬೈಗೆ ಹೋದಮೇಲೆ ನಿಜವಾದ ಬದುಕು ಕಾಣುತ್ತಿತ್ತು. ಯಾವುದೇ ನಿರ್ದಿಷ್ಟವಾದ ಗುರಿ ಇರಲಿಲ್ಲ. ಒಮ್ಮೆ ವಿಜ್ಞಾನ ಮತ್ತೊಮ್ಮೆ ಆರ್ಟ್ಸ್, ಕಾಮರ್ಸ್ ಅಂತ ಬದಲಾಯಿಸುತ್ತಿದ್ದೆ. ನಂತರ ರಂಗಭೂಮಿಗೆ ಹೋದೆ. ಅಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡುವಾಗ ಖುಷಿ ಆಗುತ್ತಿತ್ತು. ಸುಮಾರು ಐದು ವರ್ಷ ರಂಗಭೂಮಿಯಲ್ಲಿ ಕಳೆದೆ. ಚಿಕ್ಕಂದಿನಿಂದಲೂ ಇನ್ನೊಬ್ಬರ ಹಾವಭಾವವನ್ನು ನೋಡಿ ನಕಲು ಮಾಡುವ ಅಭ್ಯಾಸವಿತ್ತು. ಅದು, ನಂತರ ಮಠಗಳಲ್ಲಿ ಕಲಿತ ಮಂತ್ರಘೋಷ ಕಲೆಗೆ ಹಾಗೂ ಸ್ಪಷ್ಟ ಉಚ್ಚಾರಣೆಗೆ ಪೂರಕವಾದವು’ ಎಂದು ಹೇಳುತ್ತಾರೆ.
ಪರೀಕ್ಷೆ ಎಂದರೆ ಭಯ: ಕಾಮಿಡಿ ಬಗ್ಗೆ ಮಾತನಾಡುವ ಅನಂತ್, ‘ನನಗೆ ಪರೀಕ್ಷೆ ಎಂದರೆ ಮಾತ್ರ ದೊಡ್ಡ ಭಯವಿತ್ತು. ಅದು ಬಿಟ್ಟರೆ ಭಯ, ಸಿಟ್ಟು ಎಲ್ಲ ಕಡಿಮೆ. ಇನ್ನು, ನಟನೆಯ ವಿಷಯಕ್ಕೆ ಬಂದರೆ, ಹಾಸ್ಯದ ಪಾತ್ರಗಳು ನೋಡೋಕೆ ಚೆಂದ ಆದರೆ ನಟಿಸುವುದು ಬಹಳ ಕಷ್ಟ’ ಎನ್ನುತ್ತಾರೆ.
ನಮ್ಮನ್ನೂ ಮೀರಿದ ಶಕ್ತಿ ಇದೆ: ಭಗವಂತನ ಶಕ್ತಿ ಇಲ್ಲದೆ ಏನಾದರು ಸಾಧಿಸುವುದು ಸಾಧ್ಯವಿಲ್ಲ ಎನ್ನುವ ಅನಂತನಾಗ್, ‘ನಾನೊಬ್ಬ ತೆರೆಯ ಮೇಲೆ ಕಾಣುತ್ತೇನೆ ಎಂದರೆ ಅದರ ಹಿಂದೆ ಅನೇಕರ ಶ್ರಮವಿರುತ್ತದೆ. ಕಥೆಯನ್ನು ಬರೆದವರು, ನಿರ್ದೇಶಕರು, ಕ್ಯಾಮರಾ ಹೀಗೆ ಹಲವರು. ಅವರೆಲ್ಲರ ಶಕ್ತಿ ಜತೆಗೆ ದೇವರ ಕೃಪೆಯು ಇರಬೇಕು. ಅಥವಾ ಆ ಶಕ್ತಿಗಳನ್ನೇ ದೇವರು ಎಂದು ನಂಬುತ್ತೇನೆ. ಬಹಳಷ್ಟು ರಿಹರ್ಸಲ್ ಬಳಿಕವೂ ಒಮ್ಮೊಮ್ಮೆ ತೆರೆಯ ಮೇಲೆ ಅಂದುಕೊಂಡಿದ್ದಕ್ಕಿಂತಲೂ ವಿಭಿನ್ನವಾಗಿ ಮೂಡಿಬರುತ್ತದೆ ಎಂದರೆ ಅಲ್ಲಿ ಏನೋ ಶಕ್ತಿ ಕೆಲಸ ಮಾಡುತ್ತಿದೆ ಎಂದರ್ಥ’ ಎನ್ನುತ್ತಾರೆ.
ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರಿಗೆ ಒಮ್ಮೆ, ‘ನಿಮ್ಮ ಇಷ್ಟದ ನಟ ಯಾರು?’ ಎಂದು ಕೇಳಿದ್ದೆ. ಅದಕ್ಕೆ ಅವರು ಹೇಳಿದ ಹೆಸರು ಅನಂತನಾಗ್. ಅವ ರೊಳಗೊಬ್ಬ ಅದ್ಭುತ ಸಾಹಿತಿ ಕೂಡ ಇದ್ದಾನೆ. ಅವರು ಬರೆದ ‘ನನ್ನ ತಮ್ಮ ಶಂಕರ’ ಪುಸ್ತಕ ಇನ್ನೂ ಜನಪ್ರಿಯ. | ಇಂದ್ರಜಿತ್ ಲಂಕೇಶ್
ನಿಜವಾದ ನಾಯಕ ಎಂದರೆ...: ತೆರಯ ಮೇಲೆ ಅನೇಕರು ನಾಯಕನ ಪಾತ್ರದಲ್ಲಿ ಮಿಂಚುತ್ತಾರೆ. ಆದರೆ ನಿಜಜೀವನದಲ್ಲಿ ನಾಯಕ ಯಾರು ಎನ್ನುವುದರ ಬಗ್ಗೆ ಅನಂತನಾಗ್, ‘ಜೀವನದಲ್ಲಿ ಯಾರು ನಿಜವಾಗಿಯೂ ಬಹಳ ಕಷ್ಟ ಪಡುತ್ತಾನೋ, ಯಾರು ತನಗೆ ಒಪ್ಪಿಸಿದ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾನೋ ಆತ ನಿಜವಾದ ನಾಯಕ. ಹಾಗೆ, ಯಾವುದೇ ಕೆಲಸ ಮಾಡಬೇಕಾದರೂ ಗುರು ಬೇಕಾಗುತ್ತದೆ. ಗುರು ಇಲ್ಲದಿದ್ದರೆ ಬ್ರಹ್ಮ, ವಿಷ್ಣು, ಮಹೇಶ್ವರ, ರಾಮ, ಕೃಷ್ಣ ಹೀಗೆ ದೇವರುಗಳ ಕಲ್ಪನೆ ಬರುವುದೇ ಕಷ್ಟವಾಗುತ್ತಿತ್ತು.’ ಎಂದು ಹೇಳುತ್ತಾರೆ. ಇದರ ಜತೆಗೆ ಗುರುವಿನ ಬಗ್ಗೆ ಹಾಡನ್ನು ಹಾಡಿದರು ಅನಂತನಾಗ್.
ಜ್ವಾಲಾಮುಖಿಯಂತೆ: ಅನಂತನಾಗ್ ಅವರ ಸಿಟ್ಟಿನ ಬಗ್ಗೆ ಪತ್ನಿ ಗಾಯತ್ರಿ , ‘ಅವರಿಗೆ ಕೋಪ ಸಿಕ್ಕಾಪಟ್ಟೆ ಬರುತ್ತದೆ. ಒಂದು ಹೊಟೆಲ್ನಲ್ಲಿ ದಕ್ಷಿಣ ಭಾರತ ಊಟ ಇರಲಿಲ್ಲ ಎಂದಿದ್ದಕ್ಕೆ ‘ಕರ್ನಾಟಕದಲ್ಲಿದ್ದುಕೊಂಡು ಇಲ್ಲಿನ ಊಟ ಇಲ್ಲ ಅಂತೀರಲ್ಲ’ ಎಂದು ರೇಗಾಡಿದ್ದರು. ಅವರು ಜ್ವಾಲಾಮುಖಿಯಂತೆ’ ಎಂದು ನಗುತ್ತಾರೆ.
ಸಿನಿಮಾ ಲೋಕ ಎಂದರೆ ಅನಿಶ್ಚಿತತೆ. ಇಂತಹದೊಂದು ಕ್ಷೇತ್ರದಲ್ಲಿ ಐದು ದಶಕಗಳ ಕಾಲ ಜನರನ್ನು ಮನರಂಜಿಸಿರುವ ಅನಂತನಾಗ್, ‘ಇಲ್ಲಿ ಯಾವ ಸಿನಿಮಾ ಗೆಲ್ಲುತ್ತದೆ ಎಂದು ಹೇಳುವುದು ಕಷ್ಟ. ಚೆನ್ನಾಗಿದೆ ಅಂದುಕೊಂಡು ಮಾಡಿದ ಸಿನಿಮಾ ಸೋಲಬಹುದು. ಇಂತಹ ಏರು-ಪೇರುಗಳ ನಡುವೆ ನಮ್ಮ ತೇರನ್ನು ಎಳೆದುಕೊಂಡು ಬಂದವರು ಪ್ರೇಕ್ಷಕರು. ಅನೇಕರ ಜತೆ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ನನ್ನೊಟ್ಟಿಗೆ ಕೆಲಸ ಮಾಡಿದ ಆತ್ಮೀಯರ ಪಟ್ಟಿ ಮಾಡಲು ಕುಳಿತಾಗ ಎಷ್ಟೋ ಜನರು ಈಗ ಜೀವಂತವಾಗಿಲ್ಲ ಎಂದು ತಿಳಿದು ಖಿನ್ನತೆಗೆ ಹೋಗಿದ್ದೆ. ಈ ರಂಗದಲ್ಲಿ ನನಗೆ ಆಗದ ಜನರು ಅಂತ ಯಾರೂ ಇಲ್ಲ. ಎಲ್ಲರಿಂದಲೂ ಏನೋ ಒಂದು ಕಲಿಯುವುದಿರುತ್ತದೆ. ನನಗೆ ಅನೇಕರು ಹಿನ್ನೆಲೆ ಗಾಯನ ಮಾಡಲು ಹೇಳಿದ್ದರು. ಆದರೆ, ಅದಕ್ಕೆ ಸರಿಯಾದ ತರಬೇತಿ ನನಗಿಲ್ಲ. ಹೀಗಾಗಿ ಹಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಹಾಗೆ ನೋಡಿದರೆ ಎಲ್ಲರಲ್ಲೂ ಒಬ್ಬ ಗಾಯಕ, ನಟ, ಕಲಾವಿದ ಇರುತ್ತಾನೆ’ ಎನ್ನುತ್ತಾರೆ.
- ತಾಳ್ಮೆಯ ಬರವಿದೆ
-ಯಾರಿಗೂ ಹೇಳಲ್ಲ. ಸದ್ಯ ಆ ಸಿನಿಮಾದ ದೆವ್ವ ನನಗೆ ಹಾಗೆ ಹೇಳಿಲ್ಲ ಎನ್ನುವುದೇ ಖುಷಿ
-ಅದನ್ನು ಎಲ್ಲರ ಮುಂದೆ ಹೇಳೋಕೆ ಕಷ್ಟ
-ಈ ಬದಲಾವಣೆ ಖುಷಿ ನೀಡುತ್ತದೆ. ಆದರೆ, ಜೀವನ ಸತ್ಯಗಳ ಮರೆಯದೆ ಹೊಸ ಬದಲಾವಣೆ ಆಗಬೇಕು.