

ಬೆಂಗಳೂರು: ಲಾಕ್ಡೌನ್ನಿಂದ ಉಂಟಾಗಿರುವ ಜನರ ಸಂಕಷ್ಟ ಪರಿಹಾರಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಟ 50 ಸಾವಿರ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಪ್ರತಿಪಕ್ಷಗಳು ಮುಖ್ಯಮಂತ್ರಿ ಬಳಿ ಮಂಡಿಸಿದವು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಪಕ್ಷ ಹಾಗೂ ರೈತ ಸಂಘಟನೆಗಳ ಮುಖಂಡರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯಗಳನ್ನು ಮಂಡಿಸಿತು.
ರೈತರು ಬೆಳೆದ ಪ್ರತಿ ಪದಾರ್ಥಕ್ಕೂ ಉತ್ಪಾದನಾ ವೆಚ್ಚ ಆಧರಿಸಿ, ನಿಗದಿತ ಬೆಲೆಯನ್ನು ತುರ್ತಾಗಿ ನಿಗದಿ ಮಾಡಬೇಕು. ಬೆಲೆ ಕಡಿಮೆಯಾದರೆ ಸರ್ಕಾರ ಮಧ್ಯ ಪ್ರವೇಶಿಸಿ, ಪೋ›ತ್ಸಾಹ ಧನ/ಬೆಂಬಲ ಬೆಲೆ ನೀಡಲು 5 ಸಾವಿರ ಕೋಟಿ ರೂ. ಆವರ್ತ ನಿಧಿ ಸ್ಥಾಪಿಸಬೇಕು. ಆ ನಿಧಿ ಬಳಸಿ ಎಪಿಎಂಸಿಗಳ ಮೂಲಕ ರೈತರ ಉತ್ಪನ್ನಗಳನ್ನು ಖರೀದಿಸಲು ಗ್ರಾಪಂ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಜತೆಗೆ ರೈತರು ಹಾಗೂ ಕೋಳಿ ಸಾಕಾಣಿಕೆದಾರರಿಗೂ ಲಾಕ್ಡೌನ್ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸಾಂಪ್ರದಾಯಿಕ ವೃತ್ತಿ ನಡೆಸುವವರು ಸೇರಿ ಎಲ್ಲ ವರ್ಗದ ಸಂಘಟಿತ ಮತ್ತು ಅಸಂಘಟಿತ ಕಾರ್ವಿುಕರು, ಸಣ್ಣಪುಟ್ಟ ವ್ಯಾಪಾರಿಗಳಿಗೆ ಕರೊನಾ ಮುಗಿಯುವವರೆಗೆ ಪ್ರತಿ ತಿಂಗಳು 10 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಎಚ್. ಡಿ.ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಲೀಂ ಅಹಮ್ಮದ್, ಸಂಸದ ಡಿ.ಕೆ.ಸುರೇಶ್ ನಿಯೋಗದಲ್ಲಿದ್ದರು.
ನಿಯೋಗಕ್ಕೆ ಸಿಎಂ ಭರವಸೆ
ಇತರ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸರ್ಕಾರ ತನ್ನ ಇತಿಮಿತಿಯಲ್ಲಿ ಜನರ ಸಂಕಷ್ಟ ಗಳಿಗೆ ಅತ್ಯಂತ ಮಾನವೀಯತೆಯಿಂದ ಸ್ಪಂದಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ನಿಯೋಗಕ್ಕೆ ಭರವಸೆ ನೀಡಿದರು.
ಪ್ರಮುಖ ಹಕ್ಕೊತ್ತಾಯಗಳು
ರೈತರಿಗೆ ಬರಬೇಕಾದ ಕಬ್ಬಿನ ಬಾಕಿ 3 ಸಾವಿರ ಕೋಟಿ ರೂ. ತುರ್ತು ಪಾವತಿಗೆ ಆದೇಶ
ಎಲ್ಲ ಸಹಕಾರಿ/ವಾಣಿಜ್ಯ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕನಿಷ್ಟ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ರೈತರಿಗೆ ಸಾಲ ಸೌಲಭ್ಯ
ಬಿತ್ತನೆ ಬೀಜ, ಗೊಬ್ಬರ, ಅಗತ್ಯ ಔಷಧ ಇತರ ಸಲಕರಣೆಗಳ ಉಚಿತ ನೀಡಿಕೆ
ವಿವಿಧ ಬ್ಯಾಂಕುಗಳಲ್ಲಿ ರೈತರಿಗೆ ನೀಡಿರುವ ಸಾಲ ವಸೂಲಿ ಮುಂದೂಡಿಕೆ. ಈ ಅವಧಿಯ ಸಾಲದ ಮೇಲಿನ ಬಡ್ಡಿ ಮನ್ನಾ
ಸಂಕಷ್ಟದಲ್ಲಿರುವ ಸೂಕ್ಷ್ಮ, ಅತಿಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೊಷಣೆ
ಸಿಎಂ ಪರಿಹಾರ ನಿಧಿಗೆ ಇಲ್ಲಿಯವರೆಗೆ ಎಷ್ಟು ಹಣ ಬಂದಿದೆ? ಇದನ್ನು ಯಾವ, ಯಾವ ಬಾಬ್ತಿಗೆ ಖರ್ಚು ಮಾಡಲಾಗಿದೆ? ಉಳಿಕೆ ಎಷ್ಟು ಲಭ್ಯವಿದೆ? ಎಂಬ ಮಾಹಿತಿಯ ಶ್ವೇತಪತ್ರ ಪ್ರಕಟ