

ನವದೆಹಲಿ: ಕರೊನಾದಿಂದ ಭಾರಿ ಕಂಗೆಟ್ಟಿರುವ ಕ್ಷೇತ್ರವೆಂದರೆ ಹೋಟೆಲ್ ಉದ್ಯಮ. ಜನ ಮನೆಯಿಂದಲೇ ಹೊರಗೆ ಬರಬೇಡಿ ಎಂದ ಮೇಲೆ ಊರಿಂದ ಊರಿಗೆ ಹೋಗಿ ಹೋಟೆಲ್ಗಳಲ್ಲಿ ಉಳಿದುಕೊಳ್ಳೋದಾದರೂ ಯಾರು? ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಳ್ಳುವರೆಗೆ ಹೋಟೆಲ್ ಉದ್ಯಮ ಕ್ಷೇತ್ರ ಚೇತರಿಸಿಕೊಳ್ಳುವುದು ಅನುಮಾನ.
ಕೆಲ ಹೋಟೆಲ್ಗಳನ್ನು ಕೋವಿಡ್ ರೋಗಿಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಎಷ್ಟು ದಿನಗಳವರೆಗೆ ಹೋಟೆಲ್ಗಳನ್ನು ಬಂದ್ ಮಾಡಿಕೊಂಡಿರುವುದು ಎಂದುಕೊಂಡು ತೆರೆದ ಮಾಲೀಕರು, ಜನರೇ ಬಾರದಿರುವುದರಿಮದ ಕಂಗಾಲಾಗಿದ್ದಾರೆ.
ಹೀಗಾಗಿ ಕೆಲ ಫೈವ್ಸ್ಟಾರ್ ಹೋಟೆಲ್ಗಳು ಹೊಸ ತಂತ್ರ ಅನುಸರಿಸುತ್ತಿವೆ. ಜೈಪುರ್ನಲ್ಲಿ ಈ ಐಷಾರಾಮಿ ಹೋಟೆಲ್ಗಳು ಗ್ರಾಹಕರ ಮನೆಗೆ ಊಟವನ್ನು ಕಳುಹಿಸುತ್ತಿವೆ. ಅದು ಕೂಡ ಶೇ.50 ಡಿಸ್ಕೌಂಟ್ನಲ್ಲಿ ಎಂದು ಪ್ರಚಾರ ಮಾಡುತ್ತಿವೆ.
ಐಷಾರಾಮಿ ಕಾರಿನಲ್ಲಿ, ಬಾಣಸಿಗ ಜತೆಗೇ ಊಟವನ್ನು ಕಳುಹಿಸಲಾಗುತ್ತದೆ ಎಂದು ಹೋಟೆಲ್ ಅಧಿಕಾರಿಗಳು ಹೇಳುತ್ತಾರೆ. ಇದು ಗ್ರಾಹಕರ ಅಭಿರುಚಿಯನ್ನು ಅರಿಯುವ ಪ್ರಯತ್ನ ಎನ್ನುತ್ತಾರೆ.
ಭಾರಿ ದುಬಾರಿ ಎಂದುಕೊಂಡು ಪಂಚತಾರಾ ಹೋಟೆಲ್ಗೆ ಹೋಗದವರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂಬುದು ಹೋಟೆಲ್ನವರ ವಾದ. ಹಾಲಿಡೇ ಇನ್, ಕ್ಲಾರ್ಕ್ಸ್ ಅಮೇರ್ ಹೋಟೆಲ್ ಸೇರಿ ಹಲವು ಫೈವ್ ಸ್ಟಾರ್ ಹೋಟೆಲ್ಗಳು ಇಂಥ ಸೇವೆಗಳನ್ನು ಒದಗಿಸುತ್ತಿವೆ. ಇಷ್ಟೇ ಅಲ್ಲದೇ, ಮನೆ ಬಾಗಿಲಿಗೆ ಲಾಂಡ್ರಿ ಸೇವೆಯನ್ನು ನೀಡುತ್ತಿವೆ.