ಕರೊನಾ ಸೋಂಕು ಖಚಿತವಾದರೆ... ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

Corona test 15 may 20
Published on

ನವದೆಹಲಿ: ದೇಶದಲ್ಲಿ ಕರೊನಾ ಸೋಂಕು ವ್ಯಾಪಿಸುತ್ತಿರುವ ಪ್ರಮಾಣ ನೋಡಿದರೆ, ನಮಗೆ ಯಾವಾಗ ವಕ್ಕರಿಸುತ್ತೋ ಎಂಬ ಬಗ್ಗೆ ಜನರು ಭಯಭೀತರಾಗುವುದು ಸಾಮಾನ್ಯವಾಗಿದೆ.

ವಿದೇಶಗಳಿಂದ ಬಂದವರು, ತಬ್ಲಿಘಿ, ನೆರೆ ರಾಜ್ಯದವರು, ಸೋಂಕಿತನ ಸಂಪರ್ಕಕ್ಕೆ ಬಂದವರು... ಹೀಗೆ ಮೊದಲು ವರ್ಗೀಕರಿಸಿ ಅಂಥವರಿಂದ ದೂರವಿರುವಂತೆ ತಿಳಿಸಲಾಗುತ್ತಿತ್ತು. ಆದರೆ ಈಗ ಸೋಂಕಿನ ಮೂಲವೇ ಗೊತ್ತಾಗುತ್ತಿಲ್ಲ. ಹೀಗಾಗಿ ವ್ಯಕ್ತಿಗತ ಅಂತರ ಹಾಗೂ ಶುಚಿತ್ವ ಕಾಪಾಡಿಕೊಳ್ಳುವುದೊಂದೇ ಇದಕ್ಕಿರುವ ಪರಿಹಾರ.

ಇಷ್ಟೆಲ್ಲ ಮುನ್ನೆಚ್ಚರಿಕೆ ಬಳಿಕವೂ ಕರೊನಾ ಸೋಂಕಿಗೆ ಒಳಗಾದರೆ ಭಯಪಡಬೇಕಿಲ್ಲ. ಏಕೆಂದರೆ, ಗುಣಲಕ್ಷಣಗಳಿಲ್ಲದವರು ಮನೆಯಲ್ಲಿದ್ದುಕೊಂಡೇ ಕೋವಿಡ್​19 ಕಾಯಿಲೆಗೆ ಚಿಕಿತ್ಸೆ ಪಡೆಯಬಹುದು. ಕರೊನಾ ಬಂದರೆ ಮುಂದೇನು ಎಂಬ ಬಗ್ಗೆ ಈ ಕೆಲ ಮಾಹಿತಿಗಳನ್ನು ತಿಳಿದುಕೊಂಡಿರಿ. ಕೋವಿಡ್​ ಸೋಂಕನ್ನು ಅಸಿಂಪ್ಟಮ್ಯಾಟಿಕ್​, ಪ್ರಿಸಿಂಪ್ಟಮ್ಯಾಟಿಕ್​, ಸಿಂಪ್ಟಮ್ಯಾಟಿಕ್​ ಹಾಗೂ ಮಾಡರೇಟ್​ ಎಂದು ವಿಂಗಡಿಸಲಾಗುತ್ತದೆ.

ಅಸಿಂಪ್ಟಮ್ಯಾಟಿಕ್​: ಕಾಯಿಲೆಯ ಯಾವುದೇ ಲಕ್ಷಣಗಳಿಲ್ಲದಿರುವುದನ್ನು ಅಸಿಂಪ್ಟಮ್ಯಾಟಿಕ್​ ಎಂದು ಕರೆಯಲಾಗುತ್ತದೆ. ಗುಣಲಕ್ಷಣಗಳಿರುವವರಿಗೆ ಹೋಲಿಸಿದರೆ ಇವರಿಂದ ವೈರಸ್​ ಅಷ್ಟೊಂದು ವೇಗವಾಗಿ ಹರಡುವುದಿಲ್ಲ ಎನ್ನಲಾಗುತ್ತದೆ. ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕಿಲ್ಲ. ಹೀಗಾಗಿ ಇವರನ್ನು ಮನೆಯಲ್ಲೇ ಪ್ರತ್ಯೇಕವಾಗಿಸಿರಿ ನೋಡಿಕೊಳ್ಳಬಹುದು.

ಪ್ರಿಸಿಂಪ್ಟಮ್ಯಾಟಿಕ್​: ಸೋಂಕಿನ ಆರಂಭದ ಹಂತವಿದು. ಇವರಲ್ಲಿ ಲಕ್ಷಣಗಳಿಲ್ಲದಿದ್ದರೂ ಇತರರಿಗೆ ಹರಡಬಲ್ಲರು. ನಂತರದ ಹಂತದಲ್ಲಿ ಇವರಿಗೆ ಕಾಯಿಲೆಯ ಲಕ್ಷಣಗಳು ಒಂದೊಂದಾಗಿ ಕಾಣಿಕೊಳ್ಳಲು ಆರಂಭಿಸುತ್ತವೆ. ವಾಸನೆ, ರುಚಿ ಗೊತ್ತಾಗದಿರುವುದು, ಕೆಮ್ಮು, ಉಸಿರಾಟದ ತೊಂದರೆ ಉಂಟಾಗಬಹುದು. ಇವರಿಗೆ ಮನೆ ಮದ್ದು ಅಷ್ಟಾಗಿ ಪರಿಣಾಮ ಬೀರಲಿಕ್ಕಿಲ್ಲ.

ಸಿಂಪ್ಟಮ್ಯಾಟಿಕ್​ ಹಾಗೂ ಮಾಡರೇಟ್​: ಕಾಯಿಲೆಯ ಎಲ್ಲ ಲಕ್ಷಣಗಳಿರುವವರಿಗೆ ಸಿಂಪ್ಟಮ್ಯಾಟಿಕ್​ ಎನ್ನಲಾಗುತ್ತದೆ. ಇವರಿಗೆ ಸುಸಜ್ಜಿತ ಚಿಕಿತ್ಸೆಯ ಅಗತ್ಯವಿದೆ. ಆಮ್ಲಜನಕ ಪೂರೈಕೆ ಹಾಗೂ ಅಂಗಾತ ಮಲಗಿಸಿ ಚಿಕಿತ್ಸೆ ನೀಡಲಾಗುತ್ತದೆ.

ಗಂಭೀರ ಪ್ರಕರಣಗಳು (ಸಿವಿಯರ್​ ಕೇಸ್​ಸ್​): ತೀವ್ರವಾಗಿ ಉಸಿರಾಡುವುದು ಅಥವಾ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡರೆ ಆಮ್ಲಜನಕದ ಅವಶ್ಯಕತೆ ಇರುತ್ತದೆ. ವೆಂಟಿಲೇಟರ್​ ಬೇಕಾಗಬಹುದು. ಇನ್ನೂ ತೀವ್ರವಾದ ತೊಂದರೆ ಕಾಣಿಸಿಕೊಂಡರೆ ಬಾಯಿಯ ಮೂಲಕ ನಳಿಕೆಯನ್ನು ಇಳಿಸಿ ಆಮ್ಲಜನಕ ನೀಡಿ ಉಸಿರಾಟ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಆತನ ಶ್ವಾಸಕೋಶಗಳು ಸಹಜ ಸ್ಥಿತಿಗೆ ಬರುವವರೆಗೆ ರೋಗಿಯನ್ನು ಮತ್ತಿನಲ್ಲಿ ಇಡಲಾಗುತ್ತದೆ.

ಮನೆಯಲ್ಲಿಯೇ ಚಿಕಿತ್ಸೆ ಎಂದರೇನು?: ಅಸಿಂಪ್ಟಮ್ಯಾಟಿಕ್​ ಅಥವಾ ಲಕ್ಷಣ ಇಲ್ಲದವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಪ್ರತ್ಯೇಕ ಶೌಚಗೃಹವಿರುವ ಕೋಣೆಯಲ್ಲಿ ಮನೆಯ ಇತರ ಸದಸ್ಯರಿಂದ ಬೇರೆಯಾಗಿ ಇರಬೇಕು. ವಿಶ್ರಾಂತಿ ತೆಗೆದುಕೊಳ್ಳುವುದು, ಹೆಚ್ಚು ದ್ರವಾಹಾರ, ಪೌಷ್ಟಿಕ ಆಹಾರವನ್ನು ಸೇವಿಸುವುದು, ಆಗಾಗ ಕೈ ಹಾಗೂ ನಾವು ಮುಟ್ಟುವ ವಸ್ತುಗಳನ್ನು ಸ್ಯಾನಿಟೈಸ್​ ಮಾಡುವುದು. ಆಪ್ತಮಿತ್ರ ಸಹಾಯವಾಣಿ (14410) ಕರೆ ಮಾಡಿ ವೈದ್ಯರಿಗೆ ಮಾಹಿತಿ ನೀಡುತ್ತಿರಬೇಕು. ಅವರಿಂದ ಬಂದ ಸೂಚನೆಗಳನ್ನು ಪಾಲಿಸಬೇಕು.

ಎದೆಯ ಮೇಲೆ ಕೈಯಿಟ್ಟುಕೊಂಡು ಉಸಿರಾಟದ ಪ್ರಮಾಣವನ್ನು ಆಗಾಗ ಅಳೆಯುತ್ತಿರಬೇಕು. ಉದಾಹರಣೆಗೆ ಒಂದು ನಿಮಿಷಕ್ಕೆ 12 ಬಾರಿ ಉಸಿರಾಟ ನಡೆಸುತ್ತಿದ್ದರೆ, ಅದು ಹೆಚ್ಚಾಗಬಾರದು. ಇದರೊಂದಿಗೆ ಆಮ್ಲಜನಕ ಸಾಂದ್ರತೆ ಅಳೆಯುವುದು ಇನ್ನೊಂದು ವಿಧಾನ. ಇದಕ್ಕಾಗಿ ಪಲ್ಸ್​ ಆಕ್ಸಿಮೀಟರ್​ ಬಳಸಿಕೊಳ್ಳಬಹುದು. ದೇಹದಲ್ಲಿ ಆಮ್ಲಜನಕದ ಸಾಂದ್ರತೆ ಕಡಿಮೆಯಾದರೆ, ಉಸಿರಾಟ ಹೆಚ್ಚಾಗುತ್ತದೆ. ಆಗ ವೈದ್ಯರ ಸಹಾಯಕ್ಕೆ ಮೊರೆ ಹೋಗಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net