

ಇಡೀ ಜಗತ್ತು ಅನೇಕ ಅಚ್ಚರಿಗಳು ಆಗರ ಮತ್ತು ನಿಗೂಢಗಳ ಸಾಗರ. ವಿಶ್ವದಲ್ಲಿ ಇನ್ನೂ ತಿಳಿಯಲಾಗದ ಅದೆಷ್ಟೋ ರಹಸ್ಯಗಳಿವೆ. ಅವುಗಳನ್ನು ತಿಳಿದಾಗ ನಮ್ಮ ಕಣ್ಣುಗಳ ಹುಬ್ಬು ಒಂದು ಕ್ಷಣ ಮೇಲೇರುತ್ತದೆ. ಅಂಥದ್ದೇ ನಿಗೂಢ ತಾಣಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ. ಈ ನಿಗೂಢ ಸ್ಥಳಗಳನ್ನು ಗೂಗಲ್ ಮ್ಯಾಪ್ನಲ್ಲೂ ತೋರಿಸಿಲ್ಲ. ಯಾಕೆ ಎಂಬುದನ್ನು ನಾವೀಗ ವಿವರಿಸುತ್ತೇವೆ. ಮುಂದೆ ಓದಿ.
ಟೆಕ್ನಾಲಜಿ ಅಭಿವೃದ್ಧಿಗೊಂಡ ಬಳಿಕ ಕುಳಿತಲ್ಲಿಯೇ ಇಡೀ ಜಗತ್ತನ್ನು ನೋಡಬಹುದು. ಗೂಗಲ್ ಮ್ಯಾಪ್ ಅದಕ್ಕೆ ಸೇತುವೆಯಾಗಿದೆ. ಯಾವ ಪ್ರದೇಶಕ್ಕೆ ಹೇಗೆ ಹೋಗಬೇಕು ಮತ್ತು ಅದು ಹೇಗಿದೆ ಎಂಬುದನ್ನು ಗೂಗಲ್ ಮ್ಯಾಪ್ ನಿಖರವಾಗಿ ತೋರಿಸುತ್ತದೆ. ಆದರೆ, ಕೆಲವೊಮ್ಮೆ ಎಡವಟ್ಟುಗಳಾಗಿರುವುದನ್ನು ನೋಡಿದ್ದೇವೆ. ಅದೇನೆ ಇರಲಿ ಅನೇಕ ರಹಸ್ಯ ಪ್ರದೇಶಗಳಿದ್ದು ಅವುಗಳನ್ನು ಗೂಗಲ್ ಮ್ಯಾಪ್ ಕೂಡ ತೋರಿಸಿಲ್ಲ. ಅದಕ್ಕೆ ಕಾರಣ ಏನೆಂದರೆ, ವಿವಿಧ ದೇಶದಲ್ಲಿರುವ ಈ ಸ್ಥಳಗಳು ಭದ್ರತೆ ಮತ್ತು ವಿವಿಧ ಕಾರಣಗಳಿಂದ ಗೂಗಲ್ ಮ್ಯಾಪ್ನಲ್ಲಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಅದು ಯಾವ ಸ್ಥಳಗಳು ಎಂದು ನಾವೀಗ ನೋಡೋಣ.
ಮಾರ್ಕ್ಯೂ ಪರಮಾಣು ಸಂಶೋಧನಾ ಕೇಂದ್ರವು ಫ್ರಾನ್ಸ್‌ನ ಉನ್ನತ ಪರಮಾಣು ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿದೆ. ನೀವು ಈ ಮಾರ್ಕೂಲ್ ನ್ಯೂಕ್ಲಿಯರ್ ಸೈಟ್ ಅನ್ನು ಗೂಗಲ್ ಮ್ಯಾಪ್ನಲ್ಲಿ ಹುಡುಕಿದರೆ, ಇಡೀ ಪ್ರದೇಶವು ಪಿಕ್ಸಲೇಟ್ ಆಗಿದೆ. ಫ್ರಾನ್ಸ್ ಮನವಿ ಮೇರೆಗೆ ಗೂಗಲ್ ಆ ಪ್ರದೇಶವನ್ನು ಪಿಕ್ಸಲೇಟ್ ಮಾಡಿದೆ.
ಅಮ್ಚಿತ್ಕಾ ದ್ವೀಪವನ್ನು 1950ರ ದಶಕದ ಅಂತ್ಯದಲ್ಲಿ ಭೂಗತ ಪರಮಾಣು ಪರೀಕ್ಷೆಗಾಗಿ ಅಮೆರಿಕದ ಪರಮಾಣು ಶಕ್ತಿ ಆಯೋಗವು ಆಯ್ಕೆ ಮಾಡಿತು. ಅಲ್ಲಿ 3 ಭೂಗತ ಪರಮಾಣು ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಹೇಳಲಾಗುತ್ತದೆ. ಅಲಾಸ್ಕಾದ ಅಮ್ಚಿತ್ಕಾ ದ್ವೀಪವು ಗೂಗಲ್ ನಕ್ಷೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಈಗಲೂ ಸಂರಕ್ಷಿತ ಪ್ರದೇಶವಾಗಿರುವ ಈ ದ್ವೀಪದಲ್ಲಿ ವಿಕಿರಣಶೀಲ ವಸ್ತುಗಳ ಸೋರಿಕೆಗಾಗಿ ನಿರಂತರ ನಿಗಾ ಇಡಲಾಗಿದೆ.
ಜೀನೆಟ್ ದ್ವೀಪವು ರಷ್ಯಾದ ಪೂರ್ವ ಸೈಬೀರಿಯನ್ ಸಮುದ್ರದಲ್ಲಿದೆ. ರಷ್ಯಾದ ಮಿಲಿಟರಿ ನೆಲೆ ಎಂದೇ ಪರಿಗಣಿಸಲ್ಪಟ್ಟಿರುವ ಕಾರಣ ಈ ಪ್ರದೇಶವನ್ನು ಗೂಗಲ್ ನಕ್ಷೆಗಳಿಂದ ಸಂಪೂರ್ಣವಾಗಿ ಮರೆಮಾಡಲಾಗಿದೆ. ಈ ಪ್ರದೇಶವನ್ನು ಹುಡುಕಲು ನೀವು ಗೂಗಲ್ ಮ್ಯಾಪ್ನಲ್ಲಿ ಟೈಪ್ ಮಾಡಿದರೆ, ಅಂತಹ ಸ್ಥಳವು ಅಸ್ತಿತ್ವದಲ್ಲಿದೆ ಎಂದು ಅದು ನಿಮಗೆ ತೋರಿಸುವುದಿಲ್ಲ. ಜೀನೆಟ್ ದ್ವೀಪವು ರಷ್ಯಾದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.
ಕಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗ್ರೀಸ್‌ನ ಕಾಸ್ ದ್ವೀಪದಲ್ಲಿದೆ. ಬೇಸಿಗೆಯಲ್ಲಿ ಪ್ರವಾಸಿಗರ ದಂದು ಹರಿದು ಬರುವುದರಿಂದ ಈ ದ್ವೀಪವು ಸಡಗರದ ಹಬ್ಬದ ಪ್ರದೇಶವಾಗಿ ಬದಲಾಗುತ್ತದೆ. ಈ ವಿಮಾನ ನಿಲ್ದಾಣವು ಗೂಗಲ್ ಮ್ಯಾಪ್ಗಳಲ್ಲಿ ಬಹಳ ಮಸುಕಾಗಿ ಗೋಚರಿಸುತ್ತದೆ. ವಿವಿಧ ದೇಶಗಳ ಪ್ರವಾಸಿಗರು ಸಹ ಇಲ್ಲಿ ಸಮಯ ಕಳೆಯುತ್ತಾರೆ.
ಈ ಪರಮಾಣು ರಿಯಾಕ್ಟರ್ ಫ್ರಾನ್ಸ್‌ನ ಲಕ್ಸೆಂಬರ್ಗ್ ನಗರದ ಸಮೀಪವಿರುವ ಗ್ರ್ಯಾಂಡ್ ಎಸ್ಟ್‌ನಲ್ಲಿದೆ. ಕ್ಯಾಟೆನೊಮ್ ಪರಮಾಣು ವಿದ್ಯುತ್ ಸ್ಥಾವರವು ವಿಶ್ವದ 9 ನೇ ಅತಿದೊಡ್ಡ ಪರಮಾಣು ರಿಯಾಕ್ಟರ್ ಆಗಿದೆ. ಭದ್ರತಾ ಕಾರಣಗಳಿಗಾಗಿ, ಇಡೀ ಪ್ರದೇಶವನ್ನು ಪಿಕ್ಸಲೇಟ್ ಮಾಡಲಾಗಿದೆ. ಆದ್ದರಿಂದ ಈ ಪರಮಾಣು ರಿಯಾಕ್ಟರ್ ಅನ್ನು ಗೂಗಲ್ ಮ್ಯಾಪ್ನಲ್ಲಿ ನೋಡಲು ಆಗುವುದಿಲ್ಲ. (ಏಜೆನ್ಸೀಸ್)