ದಂಪತಿಗೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು, ಪತಿ ಸ್ಥಿತಿ ಗಂಭೀರ: ಹಾಸ್ಯನಟ ನಾಗಭೂಷಣ್ ಪೊಲೀಸ್​ ವಶಕ್ಕೆ

Nagabhusan
Published on

ಬೆಂಗಳೂರು: ಬಡವ ರಾಸ್ಕಲ್​ ಹಾಗೂ ಡೇರ್​ ಡೆವಿಲ್​ ಮುಸ್ತಫಾ ಸಿನಿಮಾದಲ್ಲಿ ಹಾಸ್ಯದ ಹೊನಲು ಹರಿಸಿರುವ ಹಾಸ್ಯನಟ ನಾಗಭೂಷಣ್ ಅವರ ವಿರುದ್ಧ ಹಿಟ್​ ಅಂಡ್​ ರನ್​ ಆರೋಪ ಕೇಳಿಬಂದಿದ್ದು,​ ಪ್ರಕರಣ ದಾಖಲಾಗಿದೆ.

ಕುಮಾರಸ್ವಾಮಿ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪಾರ್ಥ ಎಂಬುವವರು ದೂರು ದಾಖಲಿಸಿದ್ದು, ತಮ್ಮ ತಂದೆ-ತಾಯಿಗೆ ನಾಗಭೂಷಣ್ ಅವರ ಕಾರು ಡಿಕ್ಕಿಯಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಉತ್ತರಹಳ್ಳಿಯಿಂದ ಕೋಣನಕುಂಟೆ ಕ್ರಾಸ್ ದಾರಿಯ ಮಧ್ಯೆ ಅಪಘಾತ ನಡೆದಿದೆ.

ದಂಪತಿ ರಸ್ತೆಯ ಫುಟ್ ಪಾತ್ ಮೇಲೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿದ್ದು, ಪಾರ್ಥ ಅವರ ತಾಯಿ ಪ್ರೇಮ (48) ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ತಂದೆ ಕೃಷ್ಣ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಈ ವೇಳೆ ನಾಗಭೂಷಣ್​ ಅವರು ವಾಹದಲ್ಲಿದ್ದರು ಎಂದು ತಿಳಿದುಬಂದಿದೆ. ನಾಗಭೂಷಣ್​ ಅವರು ಆರ್. ಆರ್. ನಗರದಿಂದ ಉತ್ತರಹಳ್ಳಿ ಮುಖಾಂತರ ಮನೆಗೆ ಹೋಗುತ್ತಿದ್ದರು. ಇದೇ ವೇಳೆ ಫುಟ್​ಪಾತ್ ಮೇಲೆ ದಂಪತಿ ಹೋಗುತ್ತಿದ್ದರು. ಫುಟ್​ಪಾತ್ ಮೇಲೆ ಕಾರು ಹತ್ತಿಸಿ ಅಪಘಾತ ಮಾಡಿರುವ ಆರೋಪ ಕೇಳಿಬಂದಿದೆ.

ಸದ್ಯಕ್ಕೆ ಪೊಲೀಸರು ನಾಗಭೂಷಣ್ ಅವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ನಾಗಭೂಷಣ್​ ಅವರು ಅಧಿಕಾರಿಗಳ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

ಹಾಸ್ಯನಟನಾಗಿ ನಾಗಭೂಷಣ್​ ಅವರು ಇತ್ತೀಚೆಗೆ ಚಿತ್ರೆಂಗದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದರು. ಟಗರುಪಲ್ಯ ಮೂಲಕ ಹೀರೋ ಆಗಿ ಎಂಟ್ರಿ ಕೊಡಲು ಸಜ್ಜಾಗಿದ್ದರು. ಈ ಚಿತ್ರವನ್ನು ಡಾಲಿ ಧನಂಜಯ್​ ಅವರು ತಮ್ಮ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನೆನಪಿರಲಿ ಪ್ರೇಮ್​ ಅವರ ಪುತ್ರಿ ಅಮೃತಾ ನಾಯಕಿಯಾಗಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿತ್ತು. ಅಷ್ಟರಲ್ಲಿ ಇಂತಹ ಘಟನೆ ನಡೆದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

ನಾಗಭೂಷಣ್​ ಅವರು ಇತ್ತೀಚೆಗೆ ಹೊಯ್ಸಳ, ಇಕ್ಕಟ್ಟು ಹಾಗೂ ಕೌಸಲ್ಯಸುಪ್ರಜಾರಾಮ ಸಿನಿಮಾದಲ್ಲಿ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net