ಗೂಳಿ ಪ್ರಾಣ ರಕ್ಷಿಸಲು ಹೋಗಿ ಐದು ಜನ ಜೀವಂತ ಸಮಾಧಿ..!

ranchi
Published on

ರಾಂಚಿ: ಬಾವಿಗೆ ಬಿದ್ದ ಗೂಳಿ ರಕ್ಷಿಸಲು ಹೋಗಿ ಐದು ಜನರು ಜೀವಂತವಾಗಿ ಸಮಾಧಿಯಾಗಿರುವ ಘಟನೆ ಝಾರ್ಖಂಡ್​ನ ರಾಂಚಿಯ ಪಿಸ್ಕಾ ಗ್ರಾಮದಲ್ಲಿ ನಡೆದಿದೆ.

ಮೃತರ ಗುರುತು ಪತ್ತೆಹಚ್ಚಲಾಗುತ್ತಿದ್ದು, ಗೂಳಿಯೊಂದು ಗ್ರಾಮದ ಹೊರವಲಯದ ಬಾವಿಯಲ್ಲಿ ಬಿದ್ದಿತ್ತು. ಅದನ್ನು ರಕ್ಷಿಸಲು 4 ಮಂದಿ ಬಾವಿಗೆ ಇಳಿದಿದ್ದಾರೆ. ಇತರ 3 ಜನರು ಹೊರಗಿನಿಂದ ಹಗ್ಗದ ಮೂಲಕ ಅವರಿಗೆ ಸಹಾಯ ಮಾಡುತ್ತಿದ್ದರು. ಮಳೆ ರಭಸಕ್ಕೆ ಮೆತ್ತಗಾಗಿದ್ದ ಮಣ್ಣು ಒಮ್ಮಿಂದೊಮ್ಮೆಲೆ ಕುಸಿದಿದ್ದು, ಏಳೂ ಜನ ಸಮಾಧಿಯಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಇತರ ಜನರು ಸ್ಥಳಕ್ಕೆ ಆಗಮಿಸಿ ಕೂಡಲೇ ರಕ್ಷಣಾ ತಂಡಕ್ಕೆ ಮಾಹಿತಿಯನ್ನು ತಲುಪಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯೊಂದಿಗೆ ಸ್ನೇಹ: ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡಿದ ಯುವಕ

ಸ್ಥಳಕ್ಕೆ ಬಂದ ರಕ್ಷಣಾದಳದ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ತೊಡಗಿದರು. ಅಷ್ಟರಲ್ಲಿ ಗ್ರಾಮಸ್ಥರ ದೊಡ್ಡ ಗುಂಪು ಸ್ಥಳದಲ್ಲಿ ಜಮಾಯಿಸಿದ್ದು, ಸಾಕಷ್ಟು ಪ್ರಯತ್ನದ ನಂತರ ಎಲ್ಲರನ್ನೂ ಹೊರತೆಗೆಯಲಾಯಿತು. ಆದರೆ ಅವರಲ್ಲಿ ಐದು ಜನರು ಉಸಿರುಗಟ್ಟಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಸಿಲ್ಲಿ ಪೊಲೀಸ್ ಠಾಣೆ ಪ್ರಭಾರಿ ಆಕಾಶದೀಪ್ ಘಟನೆಯನ್ನು ಖಚಿತಪಡಿಸಿದ್ದು, 7 ಜನರು ಕೆಸರಿನಲ್ಲಿ ಹೂತು ಹೋಗಿದ್ದು, ಎಲ್ಲರನ್ನು ಹೊರತೆಗೆಯಲಾಗಿದೆ. ಈ ಪೈಕಿ ಇಬ್ಬರು ಸುರಕ್ಷಿತವಾಗಿದ್ದು, 5 ಜನರು ಸಾವನ್ನಪ್ಪಿದ್ದಾರೆ. ಮೃತರ ಐವರಲ್ಲಿ ಒಬ್ಬರ ಮೃತದೇಹ ಮಾತ್ರ ಪತ್ತೆಯಾಗಿದೆ. ಉಳಿದ 4 ಶವಗಳನ್ನು ಹೊರತೆಗೆಯುವ ಪ್ರಯತ್ನ ಮುಂದುವರಿದಿದೆ. ಮೃತರೆಲ್ಲರ ಶವಗಳನ್ನು ಬಾವಿಯಲ್ಲಿ 40 ಅಡಿ ಸಿಲುಕಿರುವ ಶಂಕೆಯಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಐದು ಜನರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net