

Malayalam Blockbusters: ಪ್ರತಿವಾರ ಭಾರತೀಯ ಚಿತ್ರೋದ್ಯಮದ ಪ್ರಮುಖ ಭಾಷೆಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಸಾಲು ಸಾಲಾಗಿ ತೆರೆಕಾಣುತ್ತವೆ. ಈ ಪೈಕಿ ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್ ಮತ್ತು ಮಾಲಿವುಡ್ ಚಿತ್ರಗಳು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪೈಪೋಟಿ ನೀಡುತ್ತವೆ. ಹಲವು ಸಿನಿಪ್ರಿಯರ ಮನಗೆಲ್ಲುವಲ್ಲಿ ಎಡವಿ, ಹೀನಾಯ ಸೋಲು ಕಂಡರೆ, ಕೆಲವೇ ಕೆಲವು ಸಿನಿಮಾಗಳು ಮಾತ್ರ ನೋಡುಗರ ಕಣ್ಣಲ್ಲಿ ಉಳಿದು, ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷೆಗೂ ಮೀರಿದ ಲಾಭವನ್ನು ಗಳಿಸುತ್ತದೆ. ಆ ಸಾಲಿನಲ್ಲಿ ಕಳೆದ ವರ್ಷ ಮಾಲಿವುಡ್ ದೊಡ್ಡ ಹೊಡೆತವನ್ನೇ ಅನುಭವಿಸಿತು.
2024ರಲ್ಲಿ ಒಳ್ಳೆಯ ಕಥಾಹಂದರ ಹಾಗೂ ಚಿತ್ರರಸಿಕರು ಇಷ್ಟಪಡುವ ಜಾನರ್ ಸಿನಿಮಾಗಳನ್ನೇ ಪ್ರೇಕ್ಷಕರ ಮುಂದಿಟ್ಟರು ಮಾಲಿವುಡ್ ಕಂಡಿದ್ದು ಮಾತ್ರ ಹೀನಾಯ ಸೋಲು. ರಿಲೀಸ್ ಮಾಡಿದ ಚಿತ್ರಗಳ ಪೈಕಿ ಕೆಲವೇ ಕೆಲವು ಗೆದ್ದು ಬೀಗಿದ್ದು ಬಿಟ್ಟರೆ ಉಳಿದೆಲ್ಲಾ ಸೋಲಿಗೆ ಶರಣಾಯಿತು. ಡಿಸೆಂಬರ್ 28ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಕೆಎಫ್‌ಪಿಎ ಕಾರ್ಯದರ್ಶಿ ಬಿ. ರಾಕೇಶ್ ನೀಡಿದ ಮಾಹಿತಿ ಪ್ರಕಾರ, ಮಾಲಿವುಡ್ಗೆ 700 ಕೋಟಿ ರೂ. ನಷ್ಟ ಉಂಟಾಗಿದೆ. ತೆರೆಕಂಡ 199 ಹೊಸ ಚಲನಚಿತ್ರಗಳು ಮತ್ತು ಐದು ರೀ-ರಿಲೀಸ್ ಮಧ್ಯೆ 100 ಕೋಟಿ ಕ್ಲಬ್ ಸೇರಿದ ಸಿನಿಮಾಗಳು ಬೆರಳೆಣಿಕೆ ಮಾತ್ರ. ಅಸಲಿಗೆ ಆ ಚಿತ್ರಗಳು ಯಾವುವು ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಫೆಬ್ರವರಿ 2024ರಲ್ಲಿ ಬಿಡುಗಡೆಯಾದ ನೈಜ-ಆಧರಿತ ಕಥೆಯನ್ನು ಒಳಗೊಂಡ 'ಮಂಜುಮ್ಮೆಲ್ ಬಾಯ್ಸ್' ಪ್ರೇಕ್ಷಕರು ಮತ್ತು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ, ಪ್ರಶಂಸೆಯನ್ನು ಗಿಟ್ಟಿಸಿಕೊಂಡಿತು. ವರದಿಗಳ ಪ್ರಕಾರ, ಈ ಚಿತ್ರವು ವಿಶ್ವಾದ್ಯಂತ 239.6 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲಿಸಿದೆ.
ಟೋವಿನೋ ಥಾಮಸ್ ನಟಿಸಿದ ಫ್ಯಾಂಟಸಿ ಚಿತ್ರ ARM (ಅಜಯಂತೇ ರಂಡಂ ಮೋಷಣಂ) ಸೆಪ್ಟೆಂಬರ್ 2024ರಲ್ಲಿ ತೆರೆಕಂಡು, ಬಾಕ್ಸ್ ಆಫೀಸ್‌ನಲ್ಲಿ 101.8 ಕೋಟಿ ರೂ.ಗಳನ್ನು ಸಂಗ್ರಹಿಸಿತು.
ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 136.8 ಕೋಟಿ ರೂ.ಗಳನ್ನು ಸಂಗ್ರಹಿಸಿದ 'ಪ್ರೇಮಲು', ಸಾರ್ವಕಾಲಿಕ ಆರನೇ ಅತಿ ಹೆಚ್ಚು ಗಳಿಕೆಯ ಸಿನಿಮಾ ಮತ್ತು 2024ರ ನಾಲ್ಕನೇ ಅತಿ ಹೆಚ್ಚು ಗಳಿಕೆ ಕಂಡ ಮಲಯಾಳಂ ಚಿತ್ರ ಎಂಬ ಪಟ್ಟಿಗೆ ಸೇರ್ಪಡೆಗೊಂಡಿದೆ.
ವರದಿಗಳ ಪ್ರಕಾರ, ಫಹಾದ್ ಫಾಸಿಲ್ ಅಭಿನಯದ 'ಆವೇಶಮ್' ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 154.1 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಜೀತು ಮಾಧವನ್ ಬರೆದು ನಿರ್ದೇಶಿಸಿರುವ ಈ ಚಿತ್ರವು ಚಿತ್ರರಸಿಕರ ಮನಗೆಲ್ಲುವಲ್ಲಿ ಮೇಲುಗೈ ಸಾಧಿಸಿತು.
'ಆಡುಜೀವಿತಮ್: ದಿ ಗೋಟ್ ಲೈಫ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 156.8 ಕೋಟಿ ರೂ.ಗಳನ್ನು ದಾಖಲಿಸಿದೆ. ಮಾರ್ಚ್ 2024ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ನಾಯಕನಾಗಿ ನಟಿಸಿದ್ದು, ಪ್ರೇಕ್ಷಕರಿಂದ ಅತ್ಯುತ್ತಮ ವಿಮರ್ಶೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ,(ಏಜೆನ್ಸೀಸ್).