

ಸಾಗರ: ಮಳೆಯಿಂದ ಸಾಗರ ತಾಲೂಕಿನಲ್ಲಿ 48, ಹೊಸನಗರ ವ್ಯಾಪ್ತಿಯಲ್ಲಿ 27ಮನೆಗಳಿಗೆ ಹಾನಿಯಾಗಿದೆ. ಸಂತ್ರಸ್ತರಿಗೆ ರಾಜ್ಯ ಸರ್ಕಾರ ತಕ್ಷಣ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಒತ್ತಾಯಿಸಿದರು.
ಮನೆ ಕಳೆದುಕೊಂಡವರಿಂದ ಹಕ್ಕುಪತ್ರ, ದಾಖಲೆ ಕೇಳುವ ಬದಲು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಕಾರ ನೀಡಬೇಕು. ಅಧಿಕಾರಿಗಳಿಗೆ ಆರ್ಥಿಕ ಸಹಕಾರ ಹಾಗೂ ಅಧಿಕಾರ ಚಲಾಯಿಸಲು ಸರಿಯಾಗಿ ಅವಕಾಶ ನೀಡದಿದ್ದರೆ ಅವರೂ ಏನನ್ನೂ ಮಾಡಲು ಸಾಧ್ಯವಿಲ್ಲ. ಬರೀ ಪ್ರಚಾರದಿಂದ ಕೆಲಸ ಆಗುವುದಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಾಗರ ಕ್ಷೇತ್ರದಲ್ಲಿ ಮನೆ, ಕೃಷಿ ಭೂಮಿಯಷ್ಟೇ ಅಲ್ಲ, ರಸ್ತೆ, ಚರಂಡಿ, ಸೇತುವೆಗಳು ಹಾನಿಗೀಡಾಗಿವೆ. ಪರಿಹಾರ ನೀಡಲು ರಾಜ್ಯ ಸರ್ಕಾರದ ಸೂಚನೆ ಸ್ಪಷ್ಟವಾಗಿಲ್ಲ. ಮನೆ ಕಳೆದುಕೊಂಡವರ ಹತ್ತಿರ ಬೇರೆಬೇರೆ ದಾಖಲೆ ಕೇಳಲಾಗುತ್ತಿದೆ. ಸಂತ್ರಸ್ತರು ದಾಖಲೆ ಎಲ್ಲಿ ಹುಡುಕಬೇಕು. ಮಲೆನಾಡು ಭಾಗದಲ್ಲಿ ವಾಸ ಮಾಡುವವರಿಗೆ ಅಧಿಕೃತ ದಾಖಲೆಗಳು ಇರುವುದಿಲ್ಲ. ತಕ್ಷಣ ಅಧಿಕಾರಿಗಳು 25 ಸಾವಿರ ರೂ. ತಾತ್ಕಾಲಿಕ, ನಂತರ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನೆರೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಎನ್ನುತ್ತಿದ್ದಾರೆ. ಅಲ್ಲಿದ್ದರೆ ಏನು ಪ್ರಯೋಜನ. ಅದನ್ನು ಪರಿಹಾರ ಕಾರ್ಯಕ್ಕೆ ಉಪಯೋಗಿಸಬೇಕು. ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಅಪೆಕ್ಸ್ ಬ್ಯಾಂಕಿನ ಹಗರಣ ಸಹ ಸದ್ಯದಲ್ಲಿಯೇ ಬೆಳಕಿಗೆ ಬರಲಿದೆ. ಇದರಲ್ಲಿ ಎಲ್ಲ ಪಕ್ಷದವರೂ ಇದ್ದಾರೆ ಎಂದರು.
ಶಂಕಿತ ಡೆಂೆ ಜ್ವರದಿಂದ ಗೌತಮಪುರದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ನಿಯಂತ್ರಣ ಕ್ರಮಗಳು ಪರಿಣಾಮಕಾರಿಯಾಗಿಲ್ಲ. ನಾನು ಕಾಂಗ್ರೆಸ್‌ನವರನ್ನು ಗೂಂಡಾಗಳು ಎಂದು ಕರೆದಿಲ್ಲ. ಕಾಂಗ್ರೆಸ್‌ನ ಕೆಲವು ಪುಡಾರಿಗಳು ಎಂದಷ್ಟೇ ಹೇಳಿದ್ದೇನೆ. ಗೂಂಡಾಗಳು ಎಂದು ಕರೆಯುವ ಸಂಸ್ಕೃತಿ ನನ್ನದಲ್ಲ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ರಾಜ್ಯದಲ್ಲಿರುವುದು ಲೂಟಿಕೋರ, ಹಗರಣಗಳ ಸರ್ಕಾರ. ಅತಿವೃಷ್ಟಿಯಿಂದ ಜನರು ಸಂಕಷ್ಟದಲ್ಲಿದ್ದರೂ ನಿಗಾ ವಹಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನೆರೆಪೀಡಿತ ಪ್ರದೇಶಕ್ಕೆ ನೆಪಮಾತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಬಿಜೆಪಿ ಸಂಸದರು, ಶಾಸಕರು, ಮಾಜಿ ಮಂತ್ರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರ ಕಾರ್ಯದ ಸಂಬಂಧ ಚರ್ಚೆ ನಡೆಸಿದೆ ಎಂದರು.
ನಮ್ಮ ಕುಟುಂಬ ಒಡೆದಿದೆ. ಇದಕ್ಕೆ ಹರತಾಳು ಹಾಲಪ್ಪ ಕಾರಣ ಎಂದು ಕಾಂಗ್ರೆಸ್‌ನ ಕೆಲವರು ಅನಗತ್ಯ ವಿವಾದ ಹುಟ್ಟುಹಾಕುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಇಲ್ಲ ಎಂದು ನಾನು ಬಿಜೆಪಿ ಸೇರಿ 15 ತಿಂಗಳು ಕಳೆದಿದೆ. ಕಾಂಗ್ರೆಸ್‌ನವರಿಗೆ ಟೀಕೆ ಮಾಡಲು ಏನೂ ವಿಷಯ ಇಲ್ಲ. ನಮ್ಮ ಮನೆ ವಿಚಾರ ಬಿಟ್ಟು ಕಾಂಗ್ರೆಸ್‌ನವರು ಅಭಿವೃದ್ಧಿ ಕಡೆ ಗಮನ ಹರಿಸಲಿ. ಮನೆ ಇಬ್ಭಾಗವಾಗಿದ್ದರೆ ಅಪ್ಪ-ಮಗಳು ಒಂದೇ ಮನೆಯಲ್ಲಿ ಇರಲು ಸಾಧ್ಯವಿತ್ತಾ ಎಂದು ಬಿಜೆಪಿ ನಾಯಕಿ ಡಾ. ರಾಜನಂದಿನಿ ಕಾಗೋಡು ಪ್ರಶ್ನಿಸಿದರು.
ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶಪ್ರಸಾದ್, ರತ್ನಾಕರ ಹೊನಗೋಡು, ಮಲ್ಲಿಕಾರ್ಜುನ ಹಕ್ರೆ, ವಿ ಮಹೇಶ್, ಕೆ.ಜಿ.ಪ್ರಶಾಂತ್, ಭರ್ಮಪ್ಪ, ವಿ.ಮಹೇಶ್, ಗಿರೀಶ್ ಗೌಡ, ಸತೀಶ್, ಸುವರ್ಣ ಟೀಕಪ್ಪ, ಜಿ.ಕೆ.ಭೈರಪ್ಪ, ಬಿ.ಟಿ.ರವೀಂದ್ರ, ಸಂತೋಷ್ ಇದ್ದರು.