ಭಾರತದ ಈ ಗ್ರಾಮದಲ್ಲಿ ಮಹಿಳೆಯರು 5 ದಿನ ಬಟ್ಟೆ ಧರಿಸುವಂತಿಲ್ಲ! ವಿಚಿತ್ರ ಆಚರಣೆ ಹಿಂದಿದೆ ಕರಾಳ ಕತೆ

Bini Village
Published on

ಶಿಮ್ಲಾ: ತಾಂತ್ರಿಕವಾಗಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ಜನರು ಇಂದಿಗೂ ಮೂಢನಂಬಿಕೆಗಳಿಗೆ ಕಟ್ಟು ಬಿದ್ದು ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳು ಇವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಇನ್ನು ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅಂಥದ್ದೇ ಆಚರಣೆ ಹಿಮಾಚಲ ಪ್ರದೇಶದ ಈ ಗ್ರಾಮದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.

ಹೌದು, ಪ್ರಪಂಚದಾದ್ಯಂತ ಪುರುಷ ಮತ್ತು ಮಹಿಳೆಯರ ಸಮಾನತೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಲೇ ಇರುತ್ತದೆ. ಪ್ರಪಂಚದ ಕೆಲವು ಭಾಗಗಳಲ್ಲಿ ಮಹಿಳೆಯರ ವಿರುದ್ಧ ಕೆಲವು ಅನಿಷ್ಟ ಪದ್ಧತಿಗಳು ಇನ್ನೂ ಆಚರಣೆಯಲ್ಲಿವೆ. ಈ ಸಂಪ್ರದಾಯಗಳನ್ನು ಅನುಸರಿಸಲೇಬೇಕು ಎಂದು ಕೆಲವು ಸಾಮಾಜಿಕ ಗುಂಪುಗಳು ಮಹಿಳೆಯರನ್ನು ಒತ್ತಾಯಿಸುತ್ತಿದ್ದಾರೆ. ಇಂತಹ ವಿಚಿತ್ರ ಮೂಢನಂಬಿಕೆ ಇಂದಿಗೂ ಭಾರತದ ಹಳ್ಳಿಯೊಂದರಲ್ಲಿ ಆಚರಣೆಯಲ್ಲಿದೆ. ಆ ಗ್ರಾಮದ ಮಹಿಳೆಯರು ವರ್ಷದ ನಿರ್ದಿಷ್ಟ ತಿಂಗಳಲ್ಲಿ ಐದು ದಿನಗಳ ಕಾಲ ಬಟ್ಟೆಯನ್ನೇ ಧರಿಸಬಾರದು ಎಂಬುದು ವಿಚಿತ್ರ ಸಂಪ್ರದಾಯ.

ಡ್ರೆಸ್ ಮಾಡಿದರೆ ಕೆಟ್ಟದಾಗುತ್ತದೆ 

ಅಂದಹಾಗೆ ನಾವು ಹೇಳುತ್ತಿರುವ ಗ್ರಾಮದ ಹೆಸರು ಬಿನಿ ಎಂದು. ಇದು ಹಿಮಾಚಲ ಪ್ರದೇಶದ ಮಣಿಕರನ್ ಕಣಿವೆ ಪ್ರದೇಶದ ಒಂದು ಹಳ್ಳಿಯಾಗಿದೆ. ಈ ಗ್ರಾಮದಲ್ಲಿ ಇಂದಿಗೂ ಈ ವಿಚಿತ್ರ ಪದ್ಧತಿ ಆಚರಣೆಯಲ್ಲಿದೆ. ಅಂದರೆ ಮಳೆಗಾಲದ ಶ್ರಾವಣ ಮಾಸದಲ್ಲಿ ಐದು ದಿನ ಈ ಗ್ರಾಮದ ಯಾವೊಬ್ಬ ಹೆಂಗಸರೂ ಬಟ್ಟೆ ಧರಿಸಬಾರದು. ಅದನ್ನು ಮೀರಿ ಡ್ರೆಸ್ ಮಾಡುವವರಿಗೆ ಕೆಟ್ಟದ್ದು ಆಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ.

ಗಂಡ-ಹೆಂಡತಿ ಮಾತನಾಡುವಂತಿಲ್ಲ

ಈ ಐದು ದಿನಗಳಲ್ಲಿ ಗಂಡ-ಹೆಂಡತಿ ಪರಸ್ಪರ ಮಾತನಾಡಬಾರದು. ಅಲ್ಲದೆ ಪತಿ-ಪತ್ನಿ ಪ್ರತ್ಯೇಕವಾಗಿರಬೇಕು. ಈ ದಿನಗಳಲ್ಲಿ ಪುರುಷರಿಗೂ ಕೆಲವು ನಿರ್ಬಂಧಗಳಿವೆ. ಅದೇನೆಂದರೆ, ಈ ಐದು ದಿನಗಳಲ್ಲಿ ಹಳ್ಳಿಯಲ್ಲಿರುವ ಪುರುಷರು ಮದ್ಯಪಾನ ಮಾಡಬಾರದು ಮತ್ತು ಮಾಂಸಾಹಾರವನ್ನು ಸೇವಿಸಬಾರದು. ಯಾರೂ ಕೂರ ಯಾವುದೇ ನಿಯಮಗಳನ್ನು ಉಲ್ಲಂಘಿಸಬಾರದು. ಈ ವಿಚಿತ್ರ ಪದ್ಧತಿಯನ್ನು ಗ್ರಾಮಸ್ಥರು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಆ ಹಳ್ಳಿಯ ಜನರು ಇದನ್ನು ತಮ್ಮ ಸಾಂಪ್ರದಾಯಿಕ ಪದ್ಧತಿ ಎನ್ನುತ್ತಾರೆ.

ಆಚರಣೆಯ ಹಿಂದೆ ಕತೆಯಿದೆ

ಇನ್ನು ಈ ಆಚರಣೆಯ ಹಿಂದೆ ಒಂದು ಕತೆಯಿದೆ. ಹಿಮಾಚಲ ಪ್ರದೇಶದ ಮಣಿಕರನ್ ಕಣಿವೆಯಲ್ಲಿರುವ ಈ ಬಿನಿ ಗ್ರಾಮವನ್ನು ಕೆಲವು ದೆವ್ವಗಳು ಹಿಡಿದಿದ್ದವಂತೆ. ಆ ಗ್ರಾಮಕ್ಕೆ ಲೂನಾ ಗೋತ್ ದೇವತೆ ಬಂದಾಗ, ಆ ಎಲ್ಲ ದೆವ್ವಗಳು ನಾಶವಾದವಂತೆ. ಅಂದಿನಿಂದ ಈ ಪದ್ಧತಿಯು ಹಳ್ಳಿಗೆ ಬಂದಿತು ಎಂದು ಹೇಳಲಾಗುತ್ತದೆ ಮತ್ತು ಅದಕ್ಕೂ ಮೊದಲು ದೆವ್ವಗಳು ಸುಂದರವಾಗಿ ಬಟ್ಟೆ ಧರಿಸಿದ ಮಹಿಳೆಯರನ್ನೇ ಆವರಿಸಿಕೊಳ್ಳುತ್ತಿದ್ದವು ಎಂದು ಹೇಳಲಾಗಿದೆ. ಅದನ್ನು ನೆನಪಿಟ್ಟುಕೊಳ್ಳಲು ಈ ಹಬ್ಬವನ್ನು 5 ದಿನಗಳವರೆಗೆ ಆಚರಿಸಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net