

ಪಲಕ್ಕಾಡ್: ಕರೋಕೆ ಮೈಕ್ ಅನ್ನು ಚಾರ್ಜ್ಗೆ ಹಾಕಿ ಹಾಡುವ ವೇಳೆ ಅದು ಸ್ಫೋಟಗೊಂಡಿರುವ ಘಟನೆ ಕೇರಳದ ಪಲಕ್ಕಾಡ್ ಜಿಲ್ಲೆಯ ಕಲ್ಲಡಿಕೋಡ್ನಲ್ಲಿ ನಡೆದಿದೆ. ಅದೃಷ್ಟವಶಾತ್ 6 ವರ್ಷದ ಬಾಲಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಬಚಾವ್ ಆದ ಬಾಲಕಿಯ ಹೆಸರು ಫಿನ್ಸಾ ಇರೇನ್. ಈ ಘಟನೆ ಕಳೆದ ಭಾನುವಾರ ನಡೆದಿದೆ. ಭಾರೀ ಶಬ್ದದೊಂದಿಗೆ ಮೈಕ್ ಸ್ಫೋಟಗೊಂಡಿದೆ. ಆದರೆ, ಬಾಲಕಿಗೆ ಏನೂ ಆಗಿಲ್ಲ. ಕರೋಕೆ ಮೈಕ್ ಅನ್ನು ಆನ್ಲೈನ್ ಸೈಟ್ ಒಂದರಲ್ಲಿ ಕೇವಲ 600 ರೂಪಾಯಿಗೆ ಖರೀದಿ ಮಾಡಲಾಗಿತ್ತು.
ಮೈಕ್ ಅನ್ನು ಚಾರ್ಜ್ಗೆ ಹಾಕಿ, ಬಾಲಕಿ ಹಾಡು ಹೇಳುವಾಗ ಇದ್ದಕ್ಕಿದ್ದಂತ ಭಾರೀ ಶಬ್ಧದೊಂದಿಗೆ ಸ್ಫೋಟಗೊಂಡಿದೆ. ಅದು ಚೀನಾ ನಿರ್ಮಿತ ಮೈಕ್ ಎಂದು ಪಾಲಕರು ತಿಳಿಸಿದ್ದಾರೆ. ಆದರೆ ಮೈಕ್ನಲ್ಲಿ ಕಂಪನಿಯ ಹೆಸರು ಸ್ಪಷ್ಟವಾಗಿಲ್ಲದ ಕಾರಣ, ಕಂಪನಿಯ ವಿರುದ್ಧ ಯಾವುದೇ ದೂರು ನೀಡಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ.
ಯಾವುದೇ ಸಾಧನಗಳನ್ನು ಚಾರ್ಜ್ಗೆ ಹಾಕಿ ಬಳಸುವ ಅಭ್ಯಾಸವನ್ನು ಮೊದಲು ಬಿಡಬೇಕು. ಸಣ್ಣ ನಿರ್ಲಕ್ಷ್ಯ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರಬಹುದು. ಸದ್ಯಕ್ಕೆ ಈ ಪ್ರಕರಣದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದೇ ಇರುವುದು ಅದೃಷ್ಟ ಎಂದೇ ಹೇಳಬಹುದು. ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ಘಟನೆ ಒಂದು ಎಚ್ಚರಿಕೆ ಗಂಟೆಯಾಗಿದೆ. (ಏಜೆನ್ಸೀಸ್)