ವಿರಾಟ್​ ವಿಚಿತ್ರ ಓಟ: ಕೊಹ್ಲಿ ಕಾಮಿಡಿಗೆ ನಗೆಗಡಲಲ್ಲಿ ತೇಲಿದ ಕ್ರೀಡಾಭಿಮಾನಿಗಳು, ವಿಡಿಯೋ ವೈರಲ್​

Virat Kohli
Published on

ನವದೆಹಲಿ: ಡಾನ್ಸ್​ ಸೇರಿದಂತೆ ಕ್ರೀಡಾಂಗಣದಲ್ಲಿ ತಮ್ಮ ವಿವಿಧ ವರ್ತನೆಗಳ ಮೂಲಕ ಜನರನ್ನು ರಂಜಿಸುವುದರೊಂದಿಗೆ ವಿರಾಟ್​ ಕೊಹ್ಲಿ ಆಗಾಗ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಕೇವಲ ಅಗ್ರೆಸಿವ್​ ಆಟ ಮಾತ್ರವಲ್ಲ, ಜೋಕ್ಸ್​ ಮಾಡುವುದರಲ್ಲೂ ಕೊಹ್ಲಿ ಯಾರಿಗೇನು ಕಮ್ಮಿ ಇಲ್ಲ. ಮೈದಾನದಲ್ಲಿ ಇರಲಿ ಇಲ್ಲದಿರಲಿ ಸಮಯ ಸಿಕ್ಕಾಗಲೆಲ್ಲ ತಮ್ಮ ವಿಭಿನ್ನ ವರ್ತನೆ ಮೂಲಕ ಹಾಸ್ಯದ ಹೊನಲು ಹರಿಸುತ್ತಾರೆ,

ನಿನ್ನೆ (ಸೆ.15) ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿರುವ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಏಷ್ಯಾ ಕಪ್​ 2023 ಟೂರ್ನಿಯ ಸೂಪರ್​ 4 ಪಂದ್ಯದಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಡಗೌಟ್​ನಲ್ಲಿ ಕುಳಿತಿದ್ದ ಸ್ಟಾರ್​ ಬ್ಯಾಟರ್​ ತಮ್ಮ ತಂಡದ ಪರ ವಾಟರ್​ ಬಾಯ್​ ಆಗಿ ಕಾಣಿಕೊಳ್ಳುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದರು.

ಬಾಂಗ್ಲಾ ಆಟಗಾರ ಅನಾಮುಲ್ ಹಕ್ ವಿಕೆಟ್​ ಬಿದ್ದ ನಂತರ ತಮ್ಮ ತಂಡದ ಆಟಗಾರರಿಗೆ ಕೊಹ್ಲಿ ನೀರು ತಂದು ಕೊಟ್ಟರು. ಈ ವೇಳೆ ಕೊಹ್ಲಿ ವಿಚಿತ್ರವಾಗಿ ಓಡಿ ಬಂದಿದ್ದನ್ನು ನೋಡಿದ ಕ್ರೀಡಾಭಿಮಾನಿಗಳು ನಗೆಗಡಲಲ್ಲಿ ತೇಲಿದ್ದಾರೆ. ತುಂಬಾ ವಿಚಿತ್ರವಾಗಿ ಮತ್ತು ವಿನೂತನವಾಗಿ ಕೊಹ್ಲಿ ಓಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕೊಹ್ಲಿಯ ಹಾಸ್ಯ ಪ್ರಜ್ಞೆ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೊಹ್ಲಿಯ ಸರಳತೆಯನ್ನು ಕಂಡು ಅವರನ್ನು ಕೊಂಡಾಡಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶದ ವಿರುದ್ಧ ಕೇವಲ 6 ರನ್​ಗಳ ಅಂತರದಿಂದ ವಿರೋಚಿತ ಸೋಲು ಅನುಭವಿಸಿತು. ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಬಾಂಗ್ಲಾ, ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 265 ರನ್​ ಕಲೆ ಹಾಕಿತು. ಇದರ ಗುರಿ ಬೆನ್ನತ್ತಿದ್ದ ಭಾರತ 49.5 ಓವರ್​ಗಳಲ್ಲಿ 259 ರನ್​ಗೆ ಸರ್ವಪತನ ಕಂಡಿತು. ಶುಭಮನ್​ ಗಿಲ್​ (122 ರನ್​ 133 ಎಸೆತ, 8 ಬೌಂಡರಿ, 5 ಸಿಕ್ಸರ್​) ಮತ್ತು ಅಕ್ಷರ್​ ಪಟೇಲ್​ (42 ರನ್​, 34 ಎಸೆತ, 3 ಬೌಂಡರಿ, 2 ಸಿಕ್ಸರ್​) ಉತ್ತಮ ಆಟವಾಡಿದರೂ ಆರಂಭದಲ್ಲಿ ನಾಯಕ ರೋಹಿತ್​ ಶರ್ಮ ಶೂನ್ಯಕ್ಕೆ ಔಟಾಗಿದ್ದು ಮತ್ತು ಮಧ್ಯ ಕ್ರಮಾಂಕದ ಆಟಗಾರರು ಕೈಕೊಟ್ಟಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net