

ಒತ್ತುವರಿದಾರರಿಗೆ ಅನುಕೂಲ ಮಾಡಿಕೊಡಲು ಭೂಮಿ ತಂತ್ರಾಂಶದಲ್ಲಿ ಅನುಮೋದನೆ ನೀಡಿ ಅಕ್ರಮ ಎಸಗಿರುವ ಆರೋಪದ ಮೇಲೆ ಉಪ ವಿಭಾಗಾಧಿಕಾರಿಯೊಬ್ಬರ ವಿರುದ್ಧ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಕಂದಾಯ ಇಲಾಖೆಯಲ್ಲಿ ನಡೆಯುತ್ತಿವೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳನ್ನು ಸಂಪೂರ್ಣ ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿಕೊಂಡಿದ್ದಾರೆ.
ಯಲಹಂಕ ಉಪವಿಭಾಗಾಧಿಕಾರಿ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹಿಂದಿನ ತಹಸೀಲ್ದಾರ್ ಒಬ್ಬರು ಇಂಥದ್ದೇ ಅಕ್ರಮದಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧವೂ ಕ್ರಿಮಿನಲ್ ಕೇಸು ದಾಖಲಿಸಿ ಬಂಧಿಸಲಾಗಿದೆ. ಭ್ರಷ್ಟಚಾರ ನಿಯಂತ್ರಣ ದೃಷ್ಟಿಯಿಂದ ಸರ್ಕಾರದ ಈ ಕ್ರಮ ಸ್ವಾಗತಾರ್ಹವೇ ಸರಿ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಡೆದಿರುವ ಭೂ ಒತ್ತುವರಿ ಪ್ರಕರಣಗಳಲ್ಲಿ ಪರಸ್ಪರ ಮಿಲಾಪಿ ಸಾಧ್ಯತೆಗಳೇ ಹೆಚ್ಚು. ಹಲವು ಪ್ರಕರಣಗಳಲ್ಲಿ ಕಂದಾಯ ಇಲಾಖೆ, ಭೂಮಾಪನಾ ಇಲಾಖೆ ಅಧಿಕಾರಿಗಳ ಸಹಕಾರ ಕಂಡು ಬಂದಿದೆ. ಅಧಿಕಾರಿಗಳು ಹಲವು ಬಾರಿ ರಾಜಕೀಯ ಒತ್ತಡಕ್ಕೆ ಮಣಿದು ಅಕ್ರಮಕ್ಕೆ ಸಹಕಾರ ನೀಡಿರುವುದನ್ನೂ ತಳ್ಳಿಹಾಕಲಾಗದು.
ಅತಿ ಹೆಚ್ಚು ಭ್ರಷ್ಟಾಚಾರದ ಪ್ರಕರಣಗಳು ಕಂದಾಯ ಇಲಾಖೆಯಲ್ಲಿವೆ ಎಂದು ವರದಿಗಳು ಹೇಳುತ್ತವೆ. ಲೋಕಾಯುಕ್ತ ದಾಳಿಯಲ್ಲೂ ಕಂದಾಯ ಇಲಾಖೆ ಅಧಿಕಾರಿಗಳೇ ಮೊದಲನೆ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವು ಅಕ್ರಮ ಪ್ರಕರಣಗಳಲ್ಲಿ ಅಧಿಕಾರಿಗಳ ಹಿತಾಸಕ್ತಿ ಅಡಗಿದ್ದರೆ, ಹಲವು ಪ್ರಕರಣಗಳಲ್ಲಿ ರಾಜಕೀಯ ಒತ್ತಡವೂ ಇರುವ ಸಾಧ್ಯತೆಗಳು ಇಲ್ಲದಿಲ್ಲ. ಮಲೆನಾಡಿನಲ್ಲಿ ಬಗರ್ ಹುಕುಂ ಸಾಗುವಳಿದಾರರ ಹೆಸರಿನಲ್ಲಿ ಅನರ್ಹರಿಗೂ ಹಕ್ಕುಪತ್ರ ನೀಡಲಾಗಿದೆ. ಅರ್ಹ ರೈತರೇ ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ. ಪ್ರಭಾವಿಗಳು ರಾಜಕಾರಣಿಗಳ ಮೇಲೆ ಒತ್ತಡ ತಂದು ಹಕ್ಕುಪತ್ರ ಪಡೆದುಕೊಳ್ಳಲು ಸಫಲರಾಗಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಅನರ್ಹರಿಗೂ ಹಕ್ಕು ಪತ್ರ ಕೊಟ್ಟಿರುವ ಪ್ರಕರಣಗಳ ಸಂಖ್ಯೆ ದೊಡ್ಡದೇ ಇದೆ ಎಂದು ಹೇಳಲಾಗುತ್ತಿದೆ.
ಬಹುತೇಕ ಪ್ರಕರಣಗಳಲ್ಲಿ ಒತ್ತುವರಿದಾರರಿಗೆ ಅಧಿಕಾರಿಗಳು ಮಾತ್ರ ಸಹಕರಿಸಿಲ್ಲ. ಇಂಥ ಪ್ರಕರಣಗಳ ಸಂಖ್ಯೆ ಕಡಿಮೆ. ರಾಜಕೀಯ ಒತ್ತಡ ಮತ್ತಿತರ ಕಾರಣಗಳಿಗೆ ಮಣಿದು ಅಧಿಕಾರಿಗಳು ಅಕ್ರಮವಾಗಿ ಕೆಲಸ ಮಾಡಿಕೊಟ್ಟಿರುತ್ತಾರೆ.
ಹೀಗಾಗಿ ಕಂದಾಯ ಸಚಿವರು, ಅಧಿಕಾರಿಗಳ ಮೇಲೆ ಮಾತ್ರ ಕ್ರಿಮಿನಲ್ ಕೇಸು ದಾಖಲಿಸುವ ಬದಲಿಗೆ ಅಕ್ರಮ ಎಸಗಲು ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರಿದವರನ್ನೂ ಕಟಕಟೆಗೆ ತಂದು ನಿಲ್ಲಿಸುವ ಕೆಲಸ ಮಾಡಬೇಕು. ಈ ಹಿಂದೆಯೂ ಇದೇ ರೀತಿ ಸರ್ಕಾರಗಳು ಕಠಿಣ ಕ್ರಮಕ್ಕೆ ದಿಟ್ಟ ಹೆಜ್ಜೆ ಇಟ್ಟಿವೆ. ಆದರೆ ಕ್ರಮೇಣ ಒತ್ತಡಗಳಿಗೆ ಮಣಿದು ಹಿಂದೆ ಸರಿದಿವೆ.
ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿರುವ ಕಂದಾಯ ಸಚಿವ ಕೃಷ್ಣಬೈರೇಗೌಡರ ನಡೆ ಸ್ವಾಗತಾರ್ಹ. ಅವರು ಈ ನಿರ್ಧಾರದಿಂದ ಹಿಂದೆ ಸರಿಯದಿರಲಿ. ಅಕ್ರಮಗಳು, ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾದ ಎಲ್ಲರ ಮೇಲೂ ಕ್ರಿಮಿನಲ್ ಕೇಸು ದಾಖಲಿಸುವುದಷ್ಟೇ ಅಲ್ಲ, ಪ್ರಕರಣ ದುರ್ಬಲಗೊಳಿಸಿ ಶಿಕ್ಷೆಯಾಗದಂತೆ ನೋಡಿಕೊಳ್ಳಲೂ ಅವಕಾಶ ಕೊಡಬಾರದು.