ಪ್ರತಿದಿನ 5 ಕೋಟಿ ಸೈಬರ್ ಕಳ್ಳರ ಪಾಲು

3.75 lakh Rs. Cyber fraud
Published on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿದಿನ 5 ಕೋಟಿ ರೂಪಾಯಿ ಸೈಬರ್ ಕಳ್ಳರ ಪಾಲಾಗುತ್ತಿರುವ ಆತಂಕಕಾರಿ ವಿಚಾರ ಪೊಲೀಸ್ ಇಲಾಖೆ ವರದಿಯಿಂದ ಬೆಳಕಿಗೆ ಬಂದಿದೆ.

ನೌಕರಿ, ಗ್‌ಟಿ ಕೊಡುವುದಾಗಿ, ಟ್ರೇಡಿಂಗ್‌ನಲ್ಲಿ ಹೂಡಿಕೆ, ಡಿಜಿಟಲ್ ಆರೆಸ್ಟ್ ಸೇರಿದಂತೆ ಬೇರೆ ಬೇರೆ ವಿಧಾನದಲ್ಲಿ ಸೈಬರ್ ಕಳ್ಳರು ಅಮಾಯಕರಿಗೆ ಕರೆ ಮಾಡಿ ವಂಚನೆ ಮಾಡುತ್ತಿದ್ದಾರೆ. ಪ್ರತಿತಿಂಗಳು ಬೆಂಗಳೂರು ನಗರದಲ್ಲೇ 1,360 ಸೈಬರ್ ಅಪರಾಧಗಳು ದಾಖಲಾಗುತ್ತಿವೆ. ನ.30ರ ಅಂತ್ಯಕ್ಕೆ ಬರೋಬ್ಬರಿ 16,357 ಸೈಬರ್ ಕ್ರೈಂ ದಾಖಲಾಗಿವೆ. 1,800 ಕೋಟಿ ರೂ. ವಂಚಕರ ಪಾಲಾಗಿದೆ.

ಆ ಪೈಕಿ 716 ಪ್ರಕರಣಗಳನ್ನು ಪತ್ತೆಹಚ್ಚಿರುವ ಬೆಂಗಳೂರು ಪೊಲೀಸರು, 298 ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಬ್ಯಾಂಕ್ ಖಾತೆಗಳಲ್ಲಿದ್ದ 641 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಅಲ್ಲದೆ, ವಾರಸುದಾರರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಪೊಲೀಸರು, ಬ್ಯಾಂಕಿಂಗ್ ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು ಮತ್ತು ಖಾಸಗಿ ವ್ಯಕ್ತಿಗಳು ಸೈಬರ್ ಕ್ರೈಂ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರು ಸಹ ಅಮಾಯಕರು ವಂಚನೆಗೆ ಒಳಗಾಗುತ್ತಿದ್ದಾರೆ. ಮೋಸಕ್ಕೆ ಒಳಗಾದವರ ಪೈಕಿ ಹೆಚ್ಚಾಗಿ ವಿದ್ಯಾವಂತರು ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಮುಂದಿರುವರೇ ಸೈಬರ್ ಕಳ್ಳರ ಗಾಳಕ್ಕೆ ಸಿಲುಕಿ ಮೋಸ ಹೋಗುತ್ತಿದ್ದಾರೆ ಎಂದರೇ ತಪ್ಪಾಗದು. ಇನ್ನೂ ವಂಚನೆಗೆ ಒಳಗಾದ ಕೂಡಲೇ ಅಥವಾ ಮನವರಿಕೆ ಆದ ಸಮಯಕ್ಕೆ ಸಹಾಯಕ್ಕಾಗಿ ಕೇಂದ್ರ ಗೃಹ ಸಚಿವಾಲಯ ಹೆಲ್ಪ್‌ಲೈನ್ ಪರಿಚಯಿಸಿದೆ.

‘ಗೋಲ್ಡನ್ ಅವರ್‌‘ ಅವಧಿಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ದೂರು ದಾಖಲಿಸಿದರೇ ಕೆಲವೇ ನಿಮಿಷಗಳಲ್ಲಿ ಕೃತ್ಯಕ್ಕೆ ಬಳಸಿದ್ದ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಿದ್ದಾರೆ. ಅಲ್ಲದೆ, ತನಿಖಾ ಸಂಸ್ಥೆಗಳಿಗೂ ತನಿಖೆ ನಡೆಸಲು ಸಹಾಯವಾಗಲಿದೆ. ಸಾಕಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲವಾಗಿದೆ. ಈ ಎಲ್ಲ ಪರಿಣಾಮ ಸೈಬರ್ ಕಳ್ಳರ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳುವುದು ಸುಲಭ ವಿಧಾನ ಎಂದರೇ ಜಾಗೃತಿ ವಹಿಸುವುದು ಮತ್ತು ಅಪರಿಚಿತ ವ್ಯಕ್ತಿಗಳೊಂದಿಗೆ ಬ್ಯಾಂಕ್ ಖಾತೆ ವಿವರ ಹಂಚಿಕೊಳ್ಳದೆ ಇರುವುದು ಒಳಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೈಬರ್ ಅಪರಾಧ ಪ್ರಕರಣಗಳ ಎರಡು ವರ್ಷಗಳ ವಿವರ

-----------------------------------------

ವಿವರ                2024                                2023

------------------------------------------

ಪ್ರಕರಣ              16,357                            17,633

ಪತ್ತೆಯಾದ ಪ್ರಕರಣ  716                             3,403

ಬಂಧಿತರು             298                               399

ವಂಚನೆಯಾದ ಮೊತ್ತ 1800.57 ಕೋಟಿ         673.03 ಕೋಟಿ

ಬ್ಯಾಂಕ್ ಖಾತೆಯಲ್ಲಿ ಜಪ್ತಿ 641.96 ಕೋಟಿ       306.44 ಕೋಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net