ಸ್ವಾವಲಂಬನೆಯ ಹೆಜ್ಜೆ: ಸೇನಾ ಸಾಮಗ್ರಿ ಸ್ಥಳೀಯ ಉತ್ಪಾದನೆಗೆ 4ನೇ ಪಟ್ಟಿ

Make in india
Published on

ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಮಿಲಿಟರಿಗೆ ಅಗತ್ಯವಿರುವ ಒಂದಿಷ್ಟು ಸಾಮಗ್ರಿಗಳ ಆಮದಿಗೆ ಕಡಿವಾಣ ಹಾಕಲು ಹಾಗೂ ಸ್ಥಳೀಯವಾಗಿ ಅವುಗಳನ್ನು ಉತ್ಪಾದಿಸಲು ನಿರ್ಧಾರ ಕೈಗೊಂಡಿದೆ. ದೇಶಿಯ ಕಂಪನಿಗಳಿಂದಲೇ ಉತ್ಪಾದಿಸಲು ಉದ್ದೇಶಿಸಿರುವ 928 ಮಿಲಿಟರಿ ಉಪಕರಣಗಳು, ಶಸ್ತ್ರಾಸ್ತ್ರಗಳು ಹಾಗೂ ವ್ಯವಸ್ಥೆಗಳ ಪಟ್ಟಿಯನ್ನು ಈಗ ಬಿಡುಗಡೆ ಮಾಡಿರುವುದು ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸುವ ಮತ್ತೊಂದು ನಡೆಯಾಗಿದೆ.

ಈ ಯೋಜನೆಯಲ್ಲಿ ಉನ್ನತ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳನ್ನು ತೊಡಗಿಸಿಕೊಳ್ಳಲು ಮುಂದಾಗಿರುವುದು ಮುಂದಿನ ತಲೆಮಾರನ್ನು ವೈಜ್ಞಾನಿಕವಾಗಿ ಸಬಲೀಕರಣಗೊಳಿಸುವ ದೂರದೃಷ್ಟಿಯ ಕ್ರಮವಾಗಿ ಗೋಚರಿಸುತ್ತದೆ. ಈಗ ಸ್ಥಳೀಯವಾಗಿ ಉತ್ಪಾದಿಸಲು ಪ್ರೋತ್ಸಾಹಿಸಲು ಬಿಡುಗಡೆ ಮಾಡಿರುವ 928 ಮಿಲಿಟರಿ ಉಪಕರಣಗಳ ಪಟ್ಟಿಯ ಮೊತ್ತವು 715 ಕೋಟಿ ರೂ. ಆಗಿದೆ. ರಕ್ಷಣಾ ಕ್ಷೇತ್ರಕ್ಕೆ 2023-24ರ ಬಜೆಟ್​ನಲ್ಲಿ ಮೀಸಲಿಟ್ಟಿರುವ 5.94 ಲಕ್ಷ ಕೋಟಿ ರೂಪಾಯಿಯ ಗಾತ್ರಕ್ಕೆ ಹೋಲಿಸಿದರೆ ಈ ಮೊತ್ತವು ನಗಣ್ಯವಾದರೂ ಮುನ್ನೋಟವಿರುವ ಕ್ರಮ ಎಂಬಂತೆ ಕಂಡುಬರುತ್ತದೆ. ಏಕೆಂದರೆ, ದೇಶದ ರಕ್ಷಣೆ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ, ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಹಂತಹಂತವಾಗಿ ಸ್ವಾಲವಂಬನೆ ಸಾಧಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗ ಬಿಡುಗಡೆ ಮಾಡಿರುವ ‘ಸಕಾರಾತ್ಮಕ ಸ್ವದೇಶೀಕರಣ ಪಟ್ಟಿ’ಯು ನಾಲ್ಕನೆಯದ್ದಾಗಿದೆ.

2021ರ ಡಿಸೆಂಬರ್, 2022ರ ಮಾರ್ಚ್ ಹಾಗೂ ಆಗಸ್ಟ್​ನಲ್ಲಿ ಕ್ರಮವಾಗಿ ಮೂರು ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಮೂರು ಪಟ್ಟಿಗಳ ಪೈಕಿ ಈಗಾಗಲೇ 2,500 ರಕ್ಷಣಾ ಸಾಮಗ್ರಿಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸಲಾಗುತ್ತಿರುವುದು ಈ ಯೋಜನೆ ಯಶಸ್ಸಿನತ್ತ ಸಾಗುತ್ತಿರುವುದರ ಪ್ರತೀಕವೆನ್ನಬಹುದು. ಈ ಮೂರು ಪಟ್ಟಿಯಲ್ಲಿ ಇನ್ನುಳಿದ 1,238 ಉಪಕರಣಗಳನ್ನು ನಿಗದಿತ ಕಾಲಾವಧಿಯಲ್ಲಿ ದೇಶೀಯವಾಗಿ ಉತ್ಪಾದಿಸಲು ಉದ್ದೇಶಿಸಲಾಗಿದೆ. ಇಂತಹ ಕ್ರಮಗಳಿಂದಾಗಿ ನಮ್ಮ ದೇಶದ ಮಿಲಿಟರಿಗೆ ಬೇಕಾಗಿರುವ ಅರ್ಧದಷ್ಟು ಉಪಕರಣಗಳನ್ನು ಈಗಾಗಲೇ ದೇಶೀಯವಾಗಿಯೇ ಉತ್ಪಾದಿಸುವಂತಾಗಿರುವುದು ಸಾಧನೆ ಎನ್ನಬಹುದು.

ಮಿಲಿಟರಿ ಉಪಕರಣಗಳನ್ನು ನಮ್ಮ ದೇಶದ ಸೇನೆಯ ಪೂರೈಕೆಗೆ ಮಾತ್ರವಲ್ಲದೆ ವಿದೇಶಗಳಿಗೆ ರಫ್ತು ಮಾಡುವಲ್ಲಿಯೂ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ರಕ್ಷಣಾ ರಫ್ತು ಶೆ. 334ರಷ್ಟು ಬೆಳೆದಿದ್ದು, 75ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿರುವುದರ ಪರಿಣಾಮವಾಗಿ, 2022-23ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ ಮೊತ್ತವಾದ 15,920 ಕೋಟಿ ರೂ.ಗೆ ತಲುಪಿದೆ. ಸೇನಾ ಸಾಮಗ್ರಿಗಳನ್ನು ದೇಶೀಯವಾಗಿ ಉತ್ಪಾದನೆ ಮಾಡುವುದರಿಂದ ಹಾಗೂ ರಫ್ತು ಹೆಚ್ಚಿಸುವುದರಿಂದ ನಮ್ಮ ದೇಶದ ಜನರಿಗೆ ಉದ್ಯೋಗ ಲಭಿಸುತ್ತದೆ. ಅಲ್ಲದೆ, ಅಪಾರ ಪ್ರಮಾಣದ ವಿದೇಶಿ ವಿನಿಮಯವೂ ಉಳಿಯುತ್ತದೆ. ರಕ್ಷಣಾ ವಲಯದಲ್ಲಿ ಅಗತ್ಯವಿರುವ ಗೌಪ್ಯತೆಯನ್ನು ಸಾಧಿಸಲು ಸಹ ಅನುಕೂಲವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net