ಬೆಂಕಿ ಅವಘಡಕ್ಕೆ 49 ಬಲಿ; ಬಾಂಗ್ಲಾದೇಶದ ಕಂಟೇನರ್ ಡಿಪೊದಲ್ಲಿ ದುರಂತ..

Bangla Fire
ಬಿಎಂ ಇನ್​ಲ್ಯಾಂಡ್ ಕಂಟೇನರ್ ಡಿಪೊದಲ್ಲಿನ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ
Published on

ಢಾಕಾ: ಬಾಂಗ್ಲಾದೇಶದ ಪ್ರಮುಖ ಬಂದರು ನಗರವಾದ ಚಿತ್ತಗಾಂಗ್ ಬಳಿಯ ಖಾಸಗಿ ರಾಸಾಯನಿಕ ಕಂಟೇನರ್ ಡಿಪೊದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 49 ಜನರು ಮೃತಪಟ್ಟು 450ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸೀತಾಕುಂಡ ಉಪಜಿಲ್ಲೆಯ ಕದಮ್ರಸುಲ್ ಪ್ರದೇಶದಲ್ಲಿರುವ ಬಿಎಂ ಕಂಟೇನರ್ ಡಿಪೊದಲ್ಲಿ ಈ ಅನಾಹುತ ಸಂಭವಿಸಿದೆ. ಕಂಟೇನರ್​ಗಳ ಪೈಕಿ ಒಂದರಲ್ಲಿ ರಾಸಾಯನಿಕ ಇದ್ದಿದ್ದರಿಂದ ಬೆಂಕಿ ಹಬ್ಬಿತು ಎಂದು ಅಗ್ನಿಶಾಮಕ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವಾಗಲೇ ಸ್ಫೋಟ ಸಂಭವಿಸಿ ಬೆಂಕಿಯ ಕೆನ್ನಾಲಗೆ ಗಗನಕ್ಕೆ ಚಾಚುತ್ತಿದ್ದವು. ಸ್ಪೋಟದ ತೀವ್ರತೆಗೆ ಸಮೀಪದ ಮನೆಗಳು ಹಾಗೂ ಇತರ ಕಟ್ಟಡಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಎಂದು ರೆಡ್ ಕ್ರೆಸೆಂಟ್ ಯೂತ್ ಚಿತ್ತಗಾಂಗ್​ನ ಆರೋಗ್ಯ ಮತ್ತು ಸೇವಾ ಇಲಾಖೆಯ ಮುಖ್ಯಸ್ಥ ಇಸ್ತಕುಲ್ ಇಸ್ಲಾಂ ತಿಳಿಸಿದ್ದಾರೆ. ಸಾವಿನ ಸಂಖ್ಯೆ ಜಾಸ್ತಿಯಾಗುವ ಭೀತಿಯಿದೆ ಎಂದಿದ್ದಾರೆ.

ಲೋಡಿಂಗ್ ಪಾಯಿಂಟ್​ನಲ್ಲಿ ದುರ್ಘಟನೆ: ಬಿಎಂ ಕಂಟೇನರ್ ಡಿಪೊದಲಿನ ಲೋಡಿಂಗ್ ಪಾಯಿಂಟ್​ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು ಎಂದು ಪೊಲೀಸ್, ಅಗ್ನಿಶಾಮಕ ಪಡೆ ಮತ್ತು ಸ್ಥಳೀಯರು ಹೇಳಿದ್ದಾರೆ. ರಾಸಾಯನಿಕವೇ ಬೆಂಕಿ ಉಂಟಾಗಲು ಕಾರಣವಾಗಿದ್ದು, ಒಂದು ಕಂಟೇನರ್​ನಿಂದ ಇನ್ನೊಂದಕ್ಕೆ ಬೆಂಕಿ ಹರಡಿ ರಾತ್ರಿ 11.45ರ ಹೊತ್ತಿಗೆ ಭಾರಿ ಸ್ಫೋಟ ಸಂಭವಿಸಿತು ಎಂದು ತಿಳಿಸಿದ್ದಾರೆ.

ಬೆಂಕಿ ನಿಯಂತ್ರಿಸಲು ಅವಿರತ ಶ್ರಮ: ಬೆಂಕಿಯನ್ನು ಹರಡುವುದನ್ನು ತಡೆಯಲು ಭಾರಿ ಕಾರ್ಯಾಚರಣೆ ನಡೆಸಲಾಯಿತು. ಅಗ್ನಿಶಾಮಕ ಪಡೆಯ 19 ವಾಹನಗಳು ಅವಿರತ ಶ್ರಮಿಸಿದವು. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗಳಿಗೆ ಸಾಗಿಸಲು ಆರು ಆಂಬುಲೆನ್ಸ್​ಗಳು ಕಾರ್ಯನಿರತವಾಗಿದ್ದವು ಎಂದು ಚಿತ್ತಗಾಂಗ್​ನ ಅಗ್ನಿಶಾಮಕ ಮತ್ತು ನಾಗರಿಕ ರಕ್ಷಣಾ ಸೇವೆಯ ಸಹಾಯಕ ನಿರ್ದೇಶಕ ಮಹಮದ್ ಫಾರೂಕ್ ಹುಸೇನ್ ಸಿಕ್ದರ್ ಹೇಳಿದ್ದಾರೆ.

ಅನಾಹುತದಲ್ಲಿ ಸಂತ್ರಸ್ತವಾಗಿರುವ ಎಲ್ಲ ಕುಟುಂಬಗಳ ಜವಾಬ್ದಾರಿಯನ್ನು ನಾವು ನೋಡಿಕೊಳ್ಳುತ್ತೇವೆ | ಮುಜಿಬುರ್ ರೆಹಮಾನ್ ಬಿಎಂ ಕಂಟೇನರ್ ಡಿಪೊ ನಿರ್ದೇಶಕ

ಏನಿದು ಕಂಟೇನರ್ ಡಿಪೊ?: ಬಂದರಿನಲ್ಲಿ ಹಡಗುಗಳಿಂದ ಸರಕುಗಳ ಪೆಟ್ಟಿಗೆಗಳನ್ನು (ಕಂಟೇನರ್) ಇಳಿಸಿಕೊಂಡ ನಂತರ ಸರಕನ್ನು ಖಾಲಿ ಮಾಡಿದ ಅವುಗಳನ್ನು ಸಂಗ್ರಹಿಸಿ ಡುವ ಜಾಗವನ್ನು ಕಂಟೇನರ್ ಡಿಪೊ ಎನ್ನುತ್ತಾರೆ. ಅಲ್ಲಿಯೇ ಬೇರೆ ಸರಕನ್ನು ತುಂಬುವ ಕೆಲಸವೂ ನಡೆಯುತ್ತದೆ.

ಕಾರಣ ಅಸ್ಪಷ್ಟವೆಂದ ಡಿಪೊ: ಬೆಂಕಿ ಅನಾಹುತಕ್ಕೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಬಿಎಂ ಕಂಟೇನರ್​ಡಿಪೊದ ನಿರ್ದೇಶಕ ಮುಜಿಬುರ್ ರೆಹಮಾನ್ ಹೇಳಿದ್ದಾರೆ. ‘ಆದರೆ, ಕಂಟೇನರ್​ನಿಂದಲೇ ಬೆಂಕಿ ಆರಂಭವಾಗಿರ ಬೇಕೆಂಬುದು ನನ್ನ ಅನುಮಾನವಾಗಿದೆ’ ಎಂದಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಚಿಕಿತ್ಸೆಯ ವೆಚ್ಚವನ್ನು ಕಂಪನಿಯೇ ಭರಿಸುತ್ತದೆ ಎಂದು ರೆಹಮಾನ್ ಹೇಳಿದ್ದಾರೆ.

ಬಾಂಗ್ಲಾದ ಪ್ರಮುಖ ಕೈಗಾರಿಕಾ ದುರಂತಗಳು

  • 2012: ರಾಜಧಾನಿ ಢಾಕಾದ ಗಾರ್ವೆಂಟ್ ಫ್ಯಾಕ್ಟರಿಯೊಂದರ ಆವರಣದ ಗೇಟ್​ಗೆ ಬೀಗ ಹಾಕಿದ್ದರಿಂದ ಹೊರಬರಲಾಗದೆ ಅಗ್ನಿ ಜ್ವಾಲೆಯಲ್ಲಿ 117 ಕಾರ್ವಿುಕರ ಸಜೀವ ದಹನ.
  • 2013: ಢಾಕಾ ಹೊರವಲಯದಲ್ಲಿ ರಾಣಾ ಪ್ಲಾಜಾ ಗಾರ್ವೆಂಟ್ ಫ್ಯಾಕ್ಟರಿ ಕುಸಿದು ಬಿದ್ದ ಘೋರ ಅನಾಹುತದಲ್ಲಿ 1,100ಕ್ಕೂ ಹೆಚ್ಚು ಕಾರ್ವಿುಕರ ದುರ್ಮರಣ.
  • 2019: ಢಾಕಾದ ಅತ್ಯಂತ ಹಳೆಯ ವಸತಿ ಪ್ರದೇಶದಲ್ಲಿ ಅಗ್ನಿ ಅನಾಹುತಕ್ಕೆ ಕನಿಷ್ಠ 67 ಬಲಿ.
  • 2022: ಆಹಾರ ಮತ್ತು ಪಾನೀಯ ಫ್ಯಾಕ್ಟರಿಯ ಬೆಂಕಿ ಅವಘಡದಲ್ಲಿ 52 ಸಾವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net