

ನವದೆಹಲಿ: ಜಗತ್ತಿನಲ್ಲಿ ಕಳೆದ ವರ್ಷ ಒಟ್ಟು 45 ಪತ್ರಕರ್ತರು-ಮಾಧ್ಯಮ ಪ್ರತಿನಿಧಿಗಳ ಕೊಲೆಯಾಗಿದೆ. ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಜರ್ನಲಿಸ್ಟ್ಸ್ (ಐಎಫ್ಜೆ) ಈ ಕುರಿತ ಅಂಕಿ-ಅಂಶವನ್ನು ಬಹಿರಂಗಪಡಿಸಿದೆ. 45 ಪತ್ರಕರ್ತರ ಕೊಲೆಯಾಗಿದ್ದರೂ ಇದೊಂದು ಸಮಾಧಾನದ ಸಂಗತಿ ಎಂದೇ ಹೇಳಲಾಗಿದೆ.
ಐಎಫ್ಜೆ ಮಾಹಿತಿ ಪ್ರಕಾರ 2021ರಲ್ಲಿ ಜಗತ್ತಿನ 20 ದೇಶಗಳಲ್ಲಿ ಒಟ್ಟು 45 ಪತ್ರಕರ್ತರು-ಮಾಧ್ಯಮ ಪ್ರತಿನಿಧಿಗಳ ಕೊಲೆಯಾಗಿದೆ. ಇದಕ್ಕೂ ಹಿಂದಿನ ವರ್ಷ ಅಂದರೆ 2020ರಲ್ಲಿ ವಿಶ್ವದಲ್ಲಿ 65 ಪತ್ರಕರ್ತರ ಕೊಲೆಯಾಗಿತ್ತು. ಇನ್ನು ಕಳೆದ 30 ವರ್ಷಗಳಲ್ಲಿ ಅಂದರೆ 1991ರಿಂದ 2021ರ ವರೆಗೆ ಪ್ರಪಂಚದಲ್ಲಿ 2,721 ಪತ್ರಕರ್ತರ ಕೊಲೆಯಾಗಿದೆ ಎಂದು ಐಎಫ್ಜೆ ಹೇಳಿದೆ.
ಐಎಫ್ಜೆ ಸ್ಥಾಪನೆ ಆದಾಗಿನಿಂದ ಇಂಥದ್ದೊಂದು ಮಾಹಿತಿಯನ್ನು ಪ್ರಕಟಿಸುತ್ತಲೇ ಬಂದಿದೆ. ಅಂದರೆ ಜಗತ್ತಿನಲ್ಲಿ ವೃತ್ತಿ ಸಂಬಂಧಿತ ವಿಚಾರಕ್ಕೆ ಕೊಲೆಯಾದ-ಸಾವಿಗೀಡಾದ, ಬಾಂಬ್ ದಾಳಿಗೆ ಒಳಗಾದ ಪತ್ರಕರ್ತರು-ಮಾಧ್ಯಮ ಪ್ರತಿನಿಧಿಗಳ ಸಂಖ್ಯೆಯನ್ನು ಇದು ಪ್ರಕಟಿಸುತ್ತಿದೆ. ಅಂದಹಾಗೆ ಈ ಸಲದ ಸಂಖ್ಯೆ ಇದುವರೆಗಿನ ಎಲ್ಲ ವರ್ಷಗಳಿಂತಲೂ ಅತಿ ಕಡಿಮೆಯದ್ದಾಗಿದೆ ಎಂದು ಅದು ಸಮಾಧಾನ ವ್ಯಕ್ತಪಡಿಸಿದೆ.