

ಕೇರಳ: ದೇವರ ನಾಡು ಕೇರಳದ ವಯನಾಡಿನಲ್ಲಿ ಜುಲೈ 30ರಂದು ಉಂಟಾದ ಭಾರಿ ಮಳೆಗೆ ಬೃಹತ್ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನೂ ಮಣ್ಣಿನಡಿ ಹಾಗೂ ಅವಶೇಷಗಳಡಿ ಬದುಕುಳಿದಿರುವವರ ಪತ್ತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ರಕ್ಷಣಾ ಪಡೆ, ಭೂದುರಂತದಲ್ಲಿ ಸಾವಿಗೀಡಾದವರ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿದೆ. ಈ ಮಧ್ಯೆ ಮೃತರನ್ನು ಪತ್ತೆಹಚ್ಚುವ ಸಲುವಾಗಿ ಡಿಎನ್‌ಎ ಮಾದರಿ ಸಂಗ್ರಹ ಆರಂಭಿಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಂಡ, ಇಲ್ಲಿಯವರೆಗೆ 401 ಮೃತದೇಹ ಹಾಗೂ ದೇಹದ ಭಾಗಗಳ ಡಿಎನ್‌ಎ ಪರೀಕ್ಷೆಯನ್ನು ಸಂಪೂರ್ಣವಾಗಿ ಮುಗಿಸಿದೆ.
ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಭಾರತೀಯ ಸೇನೆ, ವಿಶೇಷ ರಕ್ಷಣಾ ಪಡೆ ಸೇರಿದಂತೆ 100ಕ್ಕೂ ಅಧಿಕ ಸ್ವಯಂಸೇವೆಕರು ಭೂದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಕೈಜೋಡಿಸಿ, 248 ವ್ಯಕ್ತಿಗಳಿಗೆ ಸೇರಿದ 349 ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ 121 ಜನ ಪುರಷರು ಮತ್ತು 127 ಮಂದಿ ಮಹಿಳೆಯರು ಎಂಬುದು ವರದಿಯಲ್ಲಿ ತಿಳಿದುಬಂದಿದೆ.
ರಾಜ್ಯ ಕಂದಾಯ ಸಚಿವ ಕೆ. ರಾಜನ್ ಪ್ರಕಾರ, "ಈ 52 ದೇಹಗಳು ಅಥವಾ ದೇಹದ ಭಾಗಗಳು ತಕ್ಷಣ ಗುರುತಿಸಲು ತುಂಬಾ ಕಷ್ಟಕರವಾಗಿತ್ತು. ಇದಕ್ಕೆ ಕಾರಣ ದೇಹಗಳು ಮಣ್ಣಿನಡಿ ಸಿಲುಕಿದ್ದರಿಂದ ಅವುಗಳು ಕೊಳೆತ ಸ್ಥಿತಿಯಲ್ಲಿತ್ತು. ಮೃತದೇಹಗಳು ಯಾರದ್ದು ಎಂದು ಪತ್ತೆಹಚ್ಚಲು ಹೆಚ್ಚಿನ ಪರೀಕ್ಷೆಯ ಅಗತ್ಯವಿರುತ್ತದೆ. ಅನೇಕ ಜನರು ಇನ್ನೂ ಅವರ ಕುಟುಂಬದವರ ಬಗ್ಗೆ ಮಾಹಿತಿ ಪಡೆಯಲು ಕಾಯುತ್ತಿದ್ದಾರೆ. ಈ ನಡುವೆ ನಿಲಂಬೂರ್ ಪ್ರದೇಶ ಮತ್ತು ಚಾಲಿಯಾರ್ ನದಿಯಲ್ಲಿ ಮಂಗಳವಾರ (ಆ.13) ಶೋಧ ಮುಂದುವರಿದಿದ್ದು, ಇನ್ನೂ ಮೂರು ದೇಹದ ಭಾಗಗಳು ಪತ್ತೆಯಾಗಿವೆ" ಎಂದು ಹೇಳಿದರು.
ಇನ್ನು ಈ ಕುರಿತು ಕೇರಳ ಅರಣ್ಯ ಸಚಿವರಾದ ಎ.ಕೆ. ಸಸೀಂದ್ರನ್ ಮಾತನಾಡಿ, "ಈಗಾಗಲೇ 231 ಶವಗಳು ಮತ್ತು ಸುಮಾರು 206 ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ, 12 ಶಿಬಿರಗಳಲ್ಲಿ ಒಟ್ಟು 1,505 ಜನರು ಆಶ್ರಯ ಪಡೆದಿದ್ದಾರೆ ಮತ್ತು 415 ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಕೇರಳ ಭೂದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಿಟ್ಟಿದ್ದು, ಇಂತಹ ಘಟನೆ ಇನ್ಯಾವತ್ತು ಮರುಕಳಿಸದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ,(ಏಜೆನ್ಸೀಸ್).