

| ಮಾದರಹಳ್ಳಿ ರಾಜು
ಮಂಡ್ಯ: ತಬ್ಲಿಘಿಗಳ ಸಂಪರ್ಕದಿಂದ ಮಳವಳ್ಳಿಗೆ ಕರೊನಾ ಬಂದಾಗ ಭಯಗೊಂಡಿದ್ದ ಮಂಡ್ಯ ಜಿಲ್ಲೆ ಜನತೆ, ಈಗ ಮುಂಬೈ ನಂಜು ದಿನದಿಂದ ದಿನಕ್ಕೆ ನಿರೀಕ್ಷೆ ಮೀರಿ ಹೆಚ್ಚಳ ಆಗುತ್ತಿರುವುದರಿಂದ ಬೆಚ್ಚಿ ಬೀಳುವಂತೆ ಮಾಡಿದೆ. ಆದರೆ, ಜಿಲ್ಲಾಡಳಿತ ಕೈಗೊಂಡ ಮುನ್ನೆಚ್ಚರಿಕೆ ಕ್ರಮದಿಂದಾಗಿ ಬಂದವರು ನೇರವಾಗಿ ಹಾಸ್ಟೆಲ್ ಕ್ವಾರಂಟೈನ್ ಆಗುತ್ತಿರುವುದರಿಂದ ಗ್ರಾಮಗಳತ್ತ ಸೋಂಕು ಹರಡದಂತೆ ಬೇಲಿ ಹಾಕಿದಂತಾಗಿದೆ.
ಒಂದು ಅಂದಾಜಿನ ಪ್ರಕಾರ, ಜಿಲ್ಲೆಯ 35,000-40,000 ಜನ ಮುಂಬೈನಲ್ಲಿದ್ದಾರೆ. ಮುಂಬೈ ಕರ್ನಾಟಕದ ಒಕ್ಕಲಿಗರ ಸಂಘ, ಕುರುಬರ ಸಂಘ, ಹಿಂದುಳಿದವರ ಸಂಘ, ಕನ್ನಡಿಗರ ಸಂಘಗಳು ಅಲ್ಲಿ ತಲೆ ಎತ್ತಿವೆ. ಸುಮಾರು 50 ವರ್ಷಗಳ ಹಿಂದೆಯೇ ಮಳೆಯಾಧಾರಿತ ಪ್ರದೇಶವಾದ ಕೆ.ಆರ್. ಪೇಟೆ ಹಾಗೂ ನಾಗಮಂಗಲ ತಾಲೂಕಿನ ಸಾವಿರಾರು ಜನತೆ ಮುಂಬೈನತ್ತ ಮುಖ ಮಾಡಿದರು. ಆರಂಭದಲ್ಲಿ ತೆರಳಿ ಶ್ರಮಪಟ್ಟು ಸಂಪಾದಿಸಿದ ಸಹಸ್ರಾರು ಜನತೆ ಉತ್ತಮ ಸ್ಥಿತಿಗೆ ತಲುಪಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ.
ಆಟೋ, ಟ್ಯಾಕ್ಸಿ ಚಾಲಕರು, ಹೋಟೆಲ್ನಲ್ಲಿ ಕೆಲಸ ಸೇರಿ ವಿವಿಧ ರೀತಿಯ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಯುವಕರು ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದಾರೆ. ಹಂದೇರಿ, ಸಂತಾಕ್ರೂಸ್, ನೆಹರುನಗರ, ವಿಲೆ ಪಾರ್ಲೆ, ವೆಸ್ಟ್ ಮುಂಬೈ, ಧಾರಾವಿ ಸೇರಿ ಮಹಾರಾಷ್ಟ್ರದ ಹಲವೆಡೆ ನೆಲೆಸಿದ್ದಾರೆ.
ಮನೆ ತಿಳಿಯದೆ ಬಂದವರ ಪರದಾಟ: ಹಲವು ವರ್ಷಗಳ ಹಿಂದೆಯೇ ಮನೆ ಬಿಟ್ಟು ಮುಂಬೈ ಸೇರಿದ್ದ ಹಲವರು ಈಗ ವಾಪಸಾಗಿ ತಮ್ಮ ಮನೆ ಎಲ್ಲಿದೆ? ಎಂದು ತಿಳಿಯದೆ ಪರದಾಡುವ ಸ್ಥಿತಿ ಕೂಡ ನಿರ್ವಣವಾಗಿದೆ. ಊರು ಸಾಕಷ್ಟು ಬೆಳೆದು, ಬದಲಾಗಿರುವ ಹಾಗೂ ಪೂರ್ವಿಕರು ಇಲ್ಲದ ಕಾರಣದಿಂದ ತಮ್ಮ ಆಸ್ತಿಪಾಸ್ತಿ ಮಾಹಿತಿ ಸಿಗದೆ ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು ಮತ್ತೊಮ್ಮೆ ‘ತ್ಯಾಜ್ಯ ಮುಕ್ತ ನಗರಿ
ಮುಂದೆ ಕಾದಿದೆ ಕರೊನಾ ಗುಮ್ಮ: ಕರೊನಾ ಗುಮ್ಮ ಬೀದಿಗೆ ಬರುತ್ತಿದ್ದಂತೆ ಸಾವಿರಾರು ಜನತೆ ವಾಮಮಾರ್ಗದ ಮೂಲಕ ಕೆ.ಆರ್.ಪೇಟೆ ಹಾಗೂ ನಾಗಮಂಗಲ ಮೊದಲಾದ ಕಡೆಗಳಿಗೆ ಬಂದಿದ್ದಾರೆ. ಈ ಪೈಕಿ ಕೆಲವರು ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಒಳಪಟ್ಟಿದ್ದರೆ, ಹಲವರು ತಮ್ಮ ಪಾಡಿಗೆ ತಾವಿದ್ದಾರೆ. ವಿಜಯವಾಣಿ ಮೇ 2ರ ಸಂಚಿಕೆಯಲ್ಲಿ ಈ ಸಂಬಂಧ ವಿಶೇಷ ವರದಿ ಪ್ರಕಟಿಸಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹೊರಗಿನಿಂದ ಬಂದವರ ಸರ್ವೆ ಮಾಡಲು ಆದೇಶಿಸಿದ್ದರು. ಸರ್ವೆ ಕಾರ್ಯಪ್ರಗತಿಯಲ್ಲಿದೆ.
ಮಂಡ್ಯ, ಕಲಬುರಗಿ, ಶಿವಮೊಗ್ಗದಲ್ಲಿ ನಾಗಾಲೋಟ: ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಮುಂಬೈನಿಂದ ಮಂಡ್ಯಕ್ಕೆ ಆಗಮಿಸಿ, ವಸತಿ ಕ್ವಾರಂಟೈನ್ನಲ್ಲಿದ್ದ 71 ಜನರಿಗೆ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ160ಕ್ಕೆ ಏರಿಕೆ ಯಾಗಿದೆ. ಶಿವಮೊಗ್ಗದಲ್ಲಿ ಮಂಗಳವಾರ ಸೋಂಕು ಪತ್ತೆಯಾಗಿರುವ 10 ಮಂದಿ ಪೈಕಿ ನಾಲ್ವರು ಮುಂಬೈನಿಂದ, ಇಬ್ಬರು ಕೇರಳದಿಂದ ಬಂದವರು. ಒಬ್ಬ ದಾವಣಗೆರೆಗೆ ಹೋಗಿ ಬಂದಿದ್ದಾರೆ. ಸಖಿ ಕೇಂದ್ರದಲ್ಲಿದ್ದ ಅತ್ಯಾಚಾರಕ್ಕೀಡಾಗಿದ್ದ ಶಿಕಾರಿಪುರ ತಾಲೂಕಿನ ಅಪ್ರಾಪ್ತೆಯಲ್ಲೂ ಸೋಂಕು ಕಂಡುಬಂದಿದೆ. ಕಲಬುರಗಿ ಜಿಲ್ಲೆಯಲ್ಲಿ 13 ಮಂದಿಗೆ ಪಾಸಿಟಿವ್ ಬಂದಿದ್ದು, ಎಲ್ಲ ಪ್ರಕರಣಗಳಿಗೆ ಮುಂಬೈ ನಂಟಿದೆ. ಕಾರವಾರದಲ್ಲಿ ನಾಲ್ವರಲ್ಲಿ ಸೋಂಕು ಕಾಣಿಸಿದ್ದು, ಸೋಂಕಿತ ಬಾಲಕ ಪಾಲಕರನ್ನು ಬಿಟ್ಟು ಆಸ್ಪತ್ರೆಗೆ ದಾಖಲಾಗಲು ಹಿಂದೇಟು ಹಾಕಿದ್ದು ಕೊನೆಗೆ ಮನವೊಲಿಸಲಾಗಿದೆ.
ಮಳೆಯಾಶ್ರಿತ ಪ್ರದೇಶ ಆದ್ದರಿಂದ ಮಂಡ್ಯ, ಹಾಸನ ಮಾತ್ರವಲ್ಲದೆ ಇಡೀ ರಾಜ್ಯದ ವಿವಿಧ ಜಿಲ್ಲೆಗಳಿಂದ 15 ಲಕ್ಷಕ್ಕೂ ಹೆಚ್ಚು ಜನತೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ. ಮಂಡ್ಯದವರು ಬರಲು ನಾನು ಕಾರಣವಾದರೆ, ಇತರ ಜಿಲ್ಲೆಗಳಿಗೆ ಬರುತ್ತಿರುವವರನ್ನು ಕರೆಸುತ್ತಿರುವವರು ಯಾರು? ಇಂಥ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಸರಿಯಲ್ಲ. ಜನರ ರಕ್ಷಣೆ ಬಗ್ಗೆ ನಾನು ಗಮನಹರಿಸಿದ್ದೇನೆ. | ಕೆ.ಸಿ.ನಾರಾಯಣಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಮುಂಬೈನಲ್ಲಿ ವಲಸಿಗರಿಗೆ ಪರೀಕ್ಷೆ ಮಾಡದೆ ಏಕಾಏಕಿ ಅವರ ರಾಜ್ಯಗಳಿಗೆ ಕಳಿಸುತ್ತಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಂಡ್ಯದ ಜನತೆ ಆತಂಕಪಡಬೇಕಿಲ್ಲ. | ಡಾ.ಎಂ.ವಿ.ವೆಂಕಟೇಶ್ ಮಂಡ್ಯ ಡಿಸಿ