

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಘನ ತ್ಯಾಜ್ಯ ಮುಕ್ತ ನಗರಿ ಪಟ್ಟಿಯಲ್ಲಿ ಸತತ ಎರಡನೇ ಬಾರಿಗೆ ‘ಫೈವ್ ಸ್ಟಾರ್’ ರೇಟಿಂಗ್ ಉಳಿಸಿಕೊಂಡಿದೆ.
ಸ್ವಚ್ಛ ಸರ್ವೇಕ್ಷಣೆಯ ಭಾಗವಾಗಿ ಈ ಘನತ್ಯಾಜ್ಯ ಮುಕ್ತ ಸಮೀಕ್ಷೆ ನಡೆದಿದ್ದು, ಕಳೆದ ಬಾರಿಯೂ ಮೈಸೂರು ಫೈವ್ ಸ್ಟಾರ್ ರೇಟಿಂಗ್ ಪಡೆದುಕೊಂಡಿತ್ತು. ಸ್ವಚ್ಛನಗರಿ ಪ್ರಶಸ್ತಿ ಪಡೆಯಲು ಘನತ್ಯಾಜ್ಯ ರೇಟಿಂಗ್ ಕೂಡ ಗಣನೆಗೆ ಬರಲಿದ್ದು, 1000 ಅಂಕಗಳಲ್ಲಿ 800 ಅಂಕ ಲಭಿಸಿದಂತಾಗಿದೆ. ಇನ್ನೊಂದೆರಡು ವಾರದಲ್ಲಿ ‘ಸ್ವಚ್ಛನಗರಿ’ ರ್ಯಾಂಕಿಂಗ್ ಕೂಡ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷದಿಂದ ಆರಂಭಗೊಂಡ ಘನತ್ಯಾಜ್ಯ ಸ್ವಚ್ಛತೆ ಸಮೀಕ್ಷೆಯಲ್ಲಿ ಮೈಸೂರು, ಇಂದೋರ್ ಮತ್ತು ಅಂಬಿಕಾಪುರ್ ನಗರಗಳು ಮಾತ್ರ ಫೈವ್ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದವು. ಈ ಬಾರಿ ಮೈಸೂರು, ಅಂಬಿಕಾಪುರ್, ರಾಜ್ಕೋಟ್, ಸೂರತ್, ಇಂದೋರ್ ನಗರಗಳು ಫೈವ್ ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ ಎಂದರು.
ಎರಡು ವರ್ಷದಲ್ಲಿ ದೇಶದ ಯಾವ ನಗರಗಳು ಘನತ್ಯಾಜ್ಯ ನಿರ್ವಹಣೆಯಲ್ಲಿ ಸೆವೆನ್ ಸ್ಟಾರ್ ರೇಟಿಂಗ್ ಪಡೆದಿಲ್ಲ. ಮುಂದಿನ ಬಾರಿ ಮೈಸೂರು ಸೆವೆನ್ ಸ್ಟಾರ್ ಪಡೆಯುವ ನಿಟ್ಟಿನಲ್ಲಿ ಶ್ರಮಿಸಲಿದೆ. ಇದರಿಂದ ಮೈಸೂರು ನಗರದ ಕೀರ್ತಿ ಮತ್ತಷ್ಟು ಹೆಚ್ಚುವ ಜತೆಗೆ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮೇಯರ್ ತಸ್ನೀಂ ಮಾತನಾಡಿ, ಕೇಂದ್ರ ವಸತಿ ಮತ್ತು ನಗರ ವ್ಯಹಾರಗಳ ಸಚಿವಾಲಯ ಆಯೋಜಿಸಿದ್ದ ತ್ಯಾಜ್ಯ ಮುಕ್ತನಗರ ಸ್ಟಾರ್ ರೇಟಿಂಗ್ನಲ್ಲಿ ದೇಶದ 1435 ನಗರಗಳು ಭಾಗವಹಿಸಿದ್ದವು. ಇದರ ಸರ್ವೇ ಕಾರ್ಯ ಜನವರಿ-ಫೆಬ್ರವರಿ ತಿಂಗಳಲ್ಲಿ ದೇಶಾದ್ಯಂತ ಹಮ್ಮಿಕೊಳ್ಳಲಾಗಿತ್ತು ಎಂದು ವಿವರಿಸಿದರು.
ಯಾವುದೇ ಮುನ್ಸೂಚನೆ ಇಲ್ಲದೇ ಸಮೀಕ್ಷೆ ತಂಡ ನಗರಕ್ಕೆ ಆಗಮಿಸಿ ತ್ಯಾಜ್ಯ ನಿರ್ವಹಣೆಯ ಸಮೀಕ್ಷೆ ನಡೆಸಿತ್ತು. ಮಂಗಳವಾರ ಪ್ರಕಟಗೊಂಡ ಇದರ ಫಲಿತಾಂಶದಲ್ಲಿ 141 ನಗರಗಳು ತ್ಯಾಜ್ಯ ಮುಕ್ತ ನಗರಗಳಾಗಿವೆ. ಇವುಗಳಲ್ಲಿ ಆರು ನಗರಗಳು ಮಾತ್ರ ಅತ್ಯುನ್ನತ ಫೈವ್ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ.
ನಗರವನ್ನು ಮತ್ತೊಮ್ಮೆ ತ್ಯಾಜ್ಯ ಮುಕ್ತನಗರದಲ್ಲಿ ಫೈವ್ ಸ್ಟಾರ್ ರೇಟಿಂಗ್ ಪಡೆಯಲು ಸಹಕಾರ ನೀಡಿದ, ಶ್ರಮಿಸಿದ ಪೌರಕಾರ್ಮಿಕರು, ನಗರಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಸ್ವಚ್ಛತಾ ರಾಯಭಾರಿಗಳು, ಸಂಘ, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಉಪಮೇಯರ್ ಸಿ.ಶ್ರೀಧರ್, ಆಡಳಿತ ಪಕ್ಷದ ಪ್ರೇಮಾಶಂಕರೇಗೌಡ, ಪ್ರತಿಪಕ್ಷದ ಎಂ.ಯು.ಸುಬ್ಬಯ್ಯ, ನಗರಪಾಲಿಕೆ ಸದಸ್ಯ ಗೋಪಿ ಮಾತನಾಡಿ, ರೇಟಿಂಗ್ ಬರಲು ಕಾರಣಕರ್ತರಾದವರಿಗೆ ಕೃತಜ್ಞತೆ ಸಲ್ಲಿಸಿದರು. ಆರೋಗ್ಯಾಧಿಕಾರಿಗಳಾದ ಡಾ.ಡಿ.ಜಿ. ನಾಗರಾಜ್, ಡಾ.ಜಯಂತ್ ಇತರರು ಇದ್ದರು.
ಮೈಸೂರು ನಗರದ ಸಾಧನೆ
2010ರಲ್ಲಿ ನಡೆದ ಪ್ರಥಮ ಸ್ವಚ್ಛ ಸರ್ವೇಕ್ಷಣೆಯಲ್ಲಿ ಚಂಡೀಗಢ ಪ್ರಥಮ, ಮೈಸೂರು ನಗರ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ನಂತರ 2015, 2016ರಲ್ಲಿ ನಡೆದ ಸಮೀಕ್ಷೆಯಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2017ರಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
2018ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರಿ ಪಟ್ಟ ಪಡೆದಿದ್ದ ಮೈಸೂರು, ಸಮಗ್ರ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತು. 2019ರಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಮೈಸೂರು 2016ರಲ್ಲಿ ಬಯಲು ಶೌಚಮುಕ್ತ ನಗರ ಪ್ರಶಸ್ತಿ ಪಡೆದುಕೊಂಡಿತ್ತು.
ಶೀಘ್ರ ಬರಲಿದೆ ರ್ಯಾಂಕಿಂಗ್ ಪಟ್ಟಿ
ಸತತ ಎರಡು ಬಾರಿ ದೇಶದಲ್ಲಿಯೇ ಸ್ವಚ್ಛನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸ್ವಚ್ಛ ಸರ್ವೇಕ್ಷಣೆ ರ್ಯಾಂಕಿಂಗ್ ಪಟ್ಟಿ ಇನ್ನೊಂದೆರಡು ವಾರದಲ್ಲಿ ಪ್ರಕಟಗೊಳ್ಳಲಿದೆ.
ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿದ್ದು, ಶೀಘ್ರವೇ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಕಳೆದ ಬಾರಿ ಸ್ವಚ್ಛತೆಯಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನ ಪಡೆದಿರುವ ಸಾಂಸ್ಕೃತಿಕ ನಗರಿ ಈ ಬಾರಿ ಮತ್ತೆ ನಂಬರ್ ಒನ್ ಪಟ್ಟಕ್ಕೆ ಏರಲು ಸಾಕಷ್ಟು ಶ್ರಮಿಸಿದೆ. ಜ.4ರಿಂದ 31ರವರೆಗೆ ನಡೆದ ಸರ್ವೇ ಕಾರ್ಯದಲ್ಲಿ ನಗರದ 1.14 ಲಕ್ಷ ಸಿಟಿಜನ್ ಫೀಡ್ ಬ್ಯಾಕ್ ನೀಡಿದ್ದು, ನಾಗರಿಕರ ಸಹಭಾಗಿತ್ವಕ್ಕೆ ಸಾಕ್ಷಿಯಾಗಿದೆ.