

ನವದೆಹಲಿ: ಕೋವಿಡ್ ಸಾಂಕ್ರಾಮಿಕತೆ ಜಗತ್ತಿನಾದ್ಯಂತ ನೂರಾರು ಕೋಟಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿರುವ ನಡುವೆಯೇ ಭಾರತದಲ್ಲಿ ಕುಬೇರರ ಸಂಖ್ಯೆ ಇನ್ನಷ್ಟು ಏರಿಕೆಯಾಗಿದೆ. ದೇಶದಲ್ಲಿ ಹೊಸದಾಗಿ 40 ಮಂದಿ ಶತ ಕೋಟ್ಯಧಿಪತಿಗಳು ಈ ಅವಧಿಯಲ್ಲಿ ಉದಯಿಸಿದ್ದಾರೆ ಎಂದು ಆಕ್ಸ್ಫಾಮ್ ಸಂಸ್ಥೆ ಹೇಳಿದೆ. ಆರೋಗ್ಯ ಮತ್ತು ಶಿಕ್ಷಣದ ಮೇಲೆ ಹೂಡಿಕೆ ಮಾಡಲು ಅತಿ ಶ್ರೀಮಂತರ ಮೇಲೆ ಶೇಕಡ ಒಂದು ಸರ್ಚಾರ್ಜ್ ವಿಧಿಸುವಂತೆ ಆಕ್ಸ್ಫಾಮ್ ಸಲಹೆ ಮಾಡಿದೆ. ಭಾರತದ ಶ್ರೀಮಂತರ ಸಂಪತ್ತು ಕರೊನಾ ಬಿಕ್ಕಟ್ಟಿನ ಅವಧಿಯಲ್ಲಿ ದುಪ್ಪಟ್ಟುಗೊಂಡಿದೆ. ಇನ್ನೊಂದೆಡೆ ಬಡತನದ ಪರಿಸ್ಥಿತಿ ಹದಗೆಟ್ಟಿದ್ದು ಸಂಪತ್ತಿನ ಮರುವಿತರಣೆ ಮಾಡಲು ಸರ್ಕಾರ ತನ್ನ ನೀತಿಗಳನ್ನು ಮರುಪರಿಶೀಲಿಸುವುದು ಅಗತ್ಯ ವಾಗಿದೆ ಎಂದು ಸೋಮವಾರ ಬಿಡುಗಡೆಯಾಗಿರುವ ಆಕ್ಸ್ ಫಾಮ್ ದಾವೋಸ್ ವರದಿ 2022 ಅಭಿಪ್ರಾಯ ಪಟ್ಟಿದೆ.
182ಕ್ಕೆ ಏರಿಕೆ: ಕಳೆದ ವರ್ಷ ಭಾರತದಲ್ಲಿನ ಶತಕೋಟ್ಯಧಿ ಪತಿಗಳ ಸಂಖ್ಯೆ 142 ಇತ್ತು. ಅದಕ್ಕೆ ಹೊಸದಾಗಿ ಇನ್ನೂ 40 ಸೇರ್ಪಡೆಯಾಗಿದ್ದು, ಈ ಸಂಖ್ಯೆ 182ಕ್ಕೆ ಏರಿದೆ. ಕರೊನಾ ಮಹಾಮಾರಿಯ ಎರಡನೇ ಅಲೆ ದೇಶದ ಆರೋಗ್ಯ ವ್ಯವಸ್ಥೆಯನ್ನು ಕಾಡಿದ್ದರೂ, ಸಿರಿವಂತರ ಆಸ್ತಿ ಇನ್ನಷ್ಟು ಹೆಚ್ಚಿರುವುದು ವ್ಯವಸ್ಥೆಯ ನೀತಿಗಳಿಗೆ ಹಿಡಿದ ಕನ್ನಡಿ ಎಂದು ಭಾವಿಸಲಾಗಿದೆ.
ಆಸ್ತಿ ಏರಿಕೆ ಜಾಗತಿಕ ವಿದ್ಯಮಾನ: ಕರೊನಾ ಬಿಕ್ಕಟ್ಟಿನ ವೇಳೆ ಶ್ರೀಮಂತರ ಆಸ್ತಿ ಹೆಚ್ಚಿರುವುದು ಜಾಗತಿಕ ವಿದ್ಯಮಾನವಾಗಿದೆ. ಸಾಂಕ್ರಾಮಿಕತೆ ಅವಧಿಯಲ್ಲಿ ಸ್ಟಾಕ್, ಕ್ರಿಪ್ಟೋ ಕರೆನ್ಸಿ ಮತ್ತು ಸರಕುಗಳ ಬೆಲೆಗಳು ಜಿಗಿತ ಕಂಡಿವೆ. ಕಳೆದ ವರ್ಷ ಜಗತ್ತಿನ 500 ಅತಿ ಶ್ರೀಮಂತರ ಆಸ್ತಿಗೆ ಒಂದು ಟ್ರಿಲಿಯನ್ ಡಾಲರ್ಗಿಂತ ಅಧಿಕ ಸಂಪತ್ತು ಹೊಸದಾಗಿ ಸೇರ್ಪಡೆಯಾಗಿದೆ.
10 ಸಿರಿವಂತರ ಆಸ್ತಿ 25 ವರ್ಷ ಶಿಕ್ಷಣಕ್ಕೆ ಸಾಕು: ಭಾರತದ 10 ಅತಿ ಶ್ರೀಮಂತ ಜನರ ಸಂಪತ್ತು 25 ವರ್ಷ ಕಾಲ ದೇಶದ ಪ್ರತಿ ಮಗುವಿನ ಶಾಲಾ ಹಾಗೂ ಉನ್ನತ ಶಿಕ್ಷಣ ನೀಡಲು ಸಾಕಾಗುತ್ತದೆ ಎಂದು ಆಕ್ಸ್ ಫಾಮ್ ಅಧ್ಯಯನ ಹೇಳಿದೆ. ವಿಶ್ವ ಆರ್ಥಿಕ ವೇದಿಕೆಯ ಆನ್ಲೈನ್ ದಾವೋಸ್ ಅಜೆಂಡಾ ಶೃಂಗಸಭೆಯ ಪ್ರಥಮ ದಿನವಾದ ಸೋಮವಾರ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಶೇ. 99 ಜನರ ಆದಾಯ ಕುಸಿತ: ಕರೊನಾ ಮಹಾಮಾರಿಯ ಮೊದಲೆರಡು ವರ್ಷಗಳಲ್ಲಿ ಶೇಕಡ 99 ಜನರ ಆದಾಯ ಕುಸಿದಿದೆ. 16 ಕೋಟಿಗೂ ಅಧಿಕ ಜನರು ಬಡತನದ ಕೂಪಕ್ಕೆ ಬಿದ್ದಿದ್ದಾರೆ ಎಂದು ವರದಿ ಹೇಳಿದೆ. ಜಗತ್ತಿನ 10 ಕುಬೇರರ ಆಸ್ತಿಯಲ್ಲಿ ಪ್ರತಿ ದಿನ 9,000 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿ ಸಂಪತ್ತು ದುಪ್ಪಟ್ಟು ಗೊಂಡಿದೆ.