

ಲಖನೌ: ಯಾವುದಾದರೂ ಸ್ಥಳಕ್ಕೆ ಹೋಗಬೇಕಾದಾಗ, ಯಾವುದಾದರೂ ಸ್ಥಳವನ್ನು ನೋಡಿ ತಿಳಿಯಬೇಕಾದಾಗ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ಸಲ ಗೂಗಲ್ ಮ್ಯಾಪ್ (Google Map), ಗೂಗಲ್ ಸರ್ಚ್ನ (Google Search) ಮೊರೆ ಹೋಗುತ್ತೇವೆ. ಅದರಲ್ಲೂ ಗೂಗಲ್ ಮ್ಯಾಪ್ ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಗೂಗಲ್ ಮ್ಯಾಪ್ (Google Map) ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದಕ್ಕೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿರುವ ಘಟನೆಯೇ ಸಾಕ್ಷಿಯಾಗಿದ್ದು, ಮೂವರು ಸ್ನೇಹಿತರು ಮೃತಪಟ್ಟಿದ್ದಾರೆ.
ಉತ್ತರಪ್ರದೇಶದ ಬರೇಲಿಯಾ ಬುಡೌನ್ನಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಫಾರೂಕಾಬಾದ್ ನಿವಾಸಿಗಳಾದ ನಿತಿನ್ (30) ಅಜಿತ್ (30) ಮತ್ತು ಮೈನಪುರಿ ಜಿಲ್ಲೆಯ ಅಮಿತ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಲೋಕೋಪಯೋಗಿ ಇಲಾಖೆಯ ನಾಲ್ವರು ಎಂಜಿನಿಯರ್‌ಗಳು ಹಾಗೂ ಗೂಗಲ್ ಮ್ಯಾಪ್ಸ್ (Google Maps) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬುಡೌನ್ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬುಡೌನ್ ಡಿಸಿ ನಿಧಿ ಶ್ರೀವಾಸ್ತವ್, ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆಂದು ರಾಯ್‌ಬರೇಲಿಗೆ ಕಾರಿನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ಗೂಗಲ್ ಮ್ಯಾಪ್ (Google Map) ನೆರವಿನಿಂದ ಬರೇಲಿ ಸಮೀಪ ರಾಮಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಬಳಸಿದ್ದಾರೆ. ಆದರೆ, ಆ ಸೇತುವೆ ಕಾಮಗಾರಿ ಅಪೂರ್ಣವಾಗಿದ್ದರಿಂದ ದುರ್ಘಟನೆ ಸಂಭವಿಸಿದೆ. ಕಾರು ಬಿದ್ದ ರಭಸಕ್ಕೆ ಸಂಪೂರ್ಣ ಜಖಂಗೊಂಡಿದ್ದು, ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ಧಾರೆ.
ಗೂಗಲ್ ಮ್ಯಾಪ್ (Google Map) ಹಾಗೂ ಲೋಕೋಪಯೋಗಿ ಇಲಾಖೆಯ (PWD) ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಲೋಕೋಪಯೋಗಿ ಇಲಾಖೆಯ (PWD) ನಾಲ್ವರು ಎಂಜಿನಿಯರ್ ಹಾಗೂ ಗೂಗಲ್ ಮ್ಯಾಪ್ಸ್ (Google Maps) ಪ್ರಾದೇಶಿಕ ಮುಖ್ಯಸ್ಥರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿಯ ಘಟನೆಗಳು ನಡೆಯದಂತೆ ಎಲ್ಲ ಕಡೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ ಎಂದು ಬದೌನ್ ಡಿಸಿ ನಿಧಿ ಶ್ರೀವಾಸ್ತವ್ ತಿಳಿಸಿದ್ದಾರೆ.