

ಕಲಬುರಗಿ: ನರ್ಸ್ (Nurse) ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಒಂದು ದಿನದ ಗಂಡು ಮಗುವನ್ನು ಅಪಹರಿಸಿರುವ ಘಟನೆ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಜಿಲ್ಲಾಸ್ಪತ್ರೆ ವಾರ್ಡ್ ನಂ. 115ರಲ್ಲಿ ಈ ಘಟನೆ ನಡೆದಿದ್ದು, ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ನಿವಾಸಿಯಾಗಿರುವ ರಾಮಕೃಷ್ಣ ಮತ್ತು ಪತ್ನಿ ಕಸ್ತೂರಿ ದಂಪತಿಯ ಗಂಡು ಮಗುವನ್ನು ಅಪಹರಿಸಲಾಗಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ಕುರಿತು ಮಾತನಾಡಿರುವ ಮಗುವಿನ ಸಂಬಂಧಿಯೊಬ್ಬರು, ಸೋಮವಾರ (ನ.25) ನಸುಕಿನ ಜಾವ 4 ಗಂಟೆಗೆ ಕಸ್ತೂರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸಂಜೆ ನರ್ಸ್ ವೇಷದಲ್ಲಿ ಸಂಪೂರ್ಣ ಮುಖ ಮುಚ್ಚಿಕೊಂಡು ಬಂದಿದ್ದ ಇಬ್ಬರು ಮಹಿಳೆಯರು ರಕ್ತ ತಪಾಸಣೆ ಮಾಡಬೇಕು ಮಗು ಕರೆದುಕೊಂಡು ಬನ್ನಿ ಎಂದು ನಮಗೆ ಹೇಳಿದರು. ನಾವು ಅದರಂತೆ ಮಗುವನ್ನು ಕರೆದುಕೊಂಡು ಹೋದೆವು. ಈ ವೇಳೆ ಮಹಿಳೆಯರು ಮಗುವನ್ನು ನಮಗೆ ಕೊಡಿ ಅಂತ ಹೇಳಿ ಆ ನಂತರ, ಮಗುವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾಹಿತಿ ಪಡೆದು ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಬಳಿಕ ಮಾತನಾಡಿದ ಸಚಿವರು ಮಗು ಕಾಣೆಯಾಗಿರುವ ಬಗ್ಗೆ ವಿವರ ಪಡೆದಿದ್ದೇನೆ. ನರ್ಸ್ ವೇಷದಲ್ಲಿ ಇಬ್ಬರು ಮಹಿಳೆಯರು ಬಂದು ಮಗು ಅಪಹರಿಸಿದ್ದು ಸಿಸಿ ಕ್ಯಾಮರಾದೃಷ್ಯದಲ್ಲಿ ಕಂಡುಬಂದಿದೆ. ತಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಮಗುವಿನ ಪತ್ತೆಗಾಗಿ ಪೊಲೀಸ್ ಕಮಿಷನರ್ ಜೊತೆ ಚರ್ಚಿಸಿದ್ದೇನೆ. ನಗರ ಪೊಲೀಸ್ ಆಯುಕ್ತರು ಮಗುವಿನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆಯ ನೆಗ್ಲಿಜೆನ್ಸಿ ಇದರಲ್ಲಿ ಕಂಡುಬರುತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.