

ಹೈದರಾಬಾದ್: ಮನೆ ಪ್ರವೇಶಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಮನೆಯ ಬೇರೆ ಬೇರೆ ಭಾಗಗಳಲ್ಲಿ ಶವಗಳಿದ್ದವು. ಇದಕ್ಕಿಂತಲೂ ಅಚ್ಚರಿ ಮೂಡಿಸಿದ ಸಂಗತಿಯೊಂದು ಹಿತ್ತಲಲ್ಲಿ ಕಂಡು ಬಂದಿತ್ತು....!
ತೆಲಂಗಾಣದ ವಾನಪರ್ತಿ ಜಿಲ್ಲೆಯ ಘಟನೆಯಿದು. ಇಲ್ಲಿನ ರೇವಳ್ಳಿ ಮಂಡಲದ ನಾಗಪುರದಲ್ಲಿ ಕಂಡು ಬಂದ ದೃಶ್ಯ ಎಂಥವರನ್ನು ಬೆಚ್ಚಿ ಬೀಳಿಸುವಂತಿತ್ತು. ಮನೆಯ ಬೇರೆ ಬೇರೆ ಕಡೆಗಳಲ್ಲಿ ನಾಲ್ಕು ಶವಗಳು ಕಂಡುಬಂದಿವೆ. ಇದರಲ್ಲಿ ಹತ್ತು ವರ್ಷದ ಬಾಲಕಿಯ ಶವವೂ ಸೇರಿದೆ. ಮನೆಯ ಹಿತ್ತಲಿನಲ್ಲಿ ಲಿಂಬೆಹಣ್ಣು, ತೆಂಗಿನಕಾಯಿ ಬಳಸಿ ಪೂಜೆ ಮಾಡಲಾಗಿದೆ. ಹೀಗಾಗಿ ಇದೊಂದು ಕ್ಷುದ್ರಪೂಜೆ ಎಂದೇ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಮನೆಯ ಹಿರಿಯ ಸದಸ್ಯೆ 60 ವರ್ಷದ ವೃದ್ದೆ ಹಾಗೂ ಆಕೆಯ 30 ವರ್ಷದ ಮಗಳು, 40 ವರ್ಷದ ಅಳಿಯ ಹಾಗೂ 10 ವರ್ಷದ ಮೊಮ್ಮಗಳು ಮೃತಪಟ್ಟವರಲ್ಲಿ ಸೇರಿದ್ದಾರೆ.
ಬಾಲಕಿಯ ಕೆನ್ನೆ ಹಾಗೂ ಕಾಲಿನ ಮೇಲೆ ಗಾಯದ ಗುರುತುಗಳಿವೆ ನಾಲ್ಕೂ ಶವಗಳು ಮನೆಯ ಬೇರೆ ಬೇರೆ ಕಡೆಗಳಲ್ಲಿ ಕಂಡು ಬಂದಿವೆ. ಮಧ್ಯರಾತ್ರಿ ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೇಲ್ನೋಟಕ್ಕೆ ಶಂಕಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಬಾಲಕ ಕೆನ್ನೆ ಮೇಲಿನ ಗಾಯ ಹಾಗೂ ಹಿತ್ತಲಿನಲ್ಲಿ ಪೂಜೆ ನಡೆಸಿರುವುದು ಹಲವು ಅನುಮಾಗಳಿಗೆ ಕಾರಣವಾಗಿದೆ. ಹೀಗಾಗಿ ತನಿಖೆ ಬಳಿಕವಷ್ಟೇ ಘಟನೆಗೆ ಕಾರಣ ತಿಳಿದು ಬರಲಿದೆ ಎಂಬುದು ಪೊಲೀಸರ ವಾದ.
ಆದರೆ, ಗ್ರಾಮಸ್ಥರ ವಾದವೇ ಬೇರೆ. ವೃದ್ದೆ ಕೆಲ ವರ್ಷಗಳ ಹಿಂದೆ ನಿಧಿ ಹುಡುಕಲೆಂದೇ ಒಬ್ಬರನ್ನು ಕರೆತಂದು ಪೂಜೆ ನಡೆಸಿದ್ದಳು. ಇದು ಕೂಡ ಅದಕ್ಕೆ ಸಂಬಂಧಿಸಿದೆ ಎಂದೇ ಹೇಳುತ್ತಾರೆ.